Political News: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಹಾಗೂ ಆದಾಯ ಮೀರಿ ಆಸ್ತಿಯನ್ನು ಸಂಪಾದಿಸಿರುವ ಆರೋಪದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಜನಾರ್ಧನ ರೆಡ್ಡಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಕಡತವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ಅನುವಾದಿತ ವರದಿ ನೀಡಿದ್ದ ಲೋಕಾಯುಕ್ತ ಪೊಲೀಸರು..
ಇನ್ನೂ ಎರಡು ಪ್ರತ್ಯೇಕವಾದ ಪ್ರಕರಣಗಳಲ್ಲಿ ಈ ಇಬ್ಬರು ನಾಯಕರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಅನುಮತಿ ನೀಡುವಂತೆ ಲೋಕಾಯುಕ್ತ ಎಸ್‌ಐಟಿ ಹಾಗೂ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಅಲ್ಲದೆ ಕನ್ನಡದ ಬದಲು ಇಂಗ್ಲೀಷ್‌ಗೆ ಪಟ್ಟಿಯನ್ನು ಅನುವಾದ ಮಾಡಿಕೊಡುವಂತೆ ಆಗ ರಾಜ್ಯಪಾಲರು ತಿಳಿಸಿದ್ದರು. ಇದಕ್ಕಾಗಿ ಸುಮಾರು 5 ಸಾವಿರ ಪುಟಗಳಲ್ಲಿ ಆರೋಪ ಪಟ್ಟಿಯನ್ನು ಲೋಕಾಯುಕ್ತ ಪೊಲೀಸರು ಸಲ್ಲಿಕೆ ಮಾಡಿದ್ದರು. ಅಂದಹಾಗೆ ರಾಜ್ಯಪಾಲರ ಸೂಚನೆಯಂತೆಯೇ ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿ ಅಧಿಕಾರಿಗಳು ರಾಜ್ಯಪಾಲರ ಕೈಗೆ ನೀಡಿದ್ದರು.
ತಾಂತ್ರಿಕ ಕಾರಣ ಕೇಳಿದ ಗೌರ್ನರ್..
ಅಲ್ಲದೆ ಮೊದಲ ಬಾರಿಗೆ ಭಾಷೆಯ ನೆಪವೊಡ್ಡಿ ಕಡತ ವಾಪಸ್ ಕಳುಹಿಸಿದ್ದ ರಾಜ್ಯಪಾಲರು ಇದೀಗ ಅದರಲ್ಲಿನ ತಾಂತ್ರಿಕ ಕಾರಣಗಳ ಹಿನ್ನೆಲೆ ಸ್ಪಷ್ಟನೆ ಕೇಳಿ ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ಇನ್ನೂ ಪ್ರಮುಖವಾಗಿ ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಸುಪ್ರೀಂಕೋರ್ಟ್‌ನ ಕೆಲವು ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಕುರಿತು ಅನುಮಾನಿಸಿರುವ ರಾಜ್ಯಪಾಲರು ತಾವು ಕೇಳಿರುವ ತಾಂತ್ರಿಕ ಕಾರಣಗಳಿಗೆ ಸ್ಪಷ್ಟನೆ ಕೋರಿ ಕಡತವನ್ನು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ತಾತ್ಕಾಲಿಕ ಸಂಕಟದಿಂದ ತಪ್ಪಿದಂತಾಗಿದೆ.
ಏನಿದು ಅಕ್ರಮ ಗಣಿಗಾರಿಕೆ ಕೇಸ್..?
ಇನ್ನೂ ಹಾಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಗಣಿ ಹಾಗೂ ಖನಿಜ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆಯನ್ನು ಶ್ರೀ ಸಾಯಿ ವೆಂಕಟೇಶ್ವರ್ ಮಿನರಲ್ಸ್ ಕಂಪನಿಗೆ ಮಂಜೂರು ಮಾಡಿದ ಆರೋಪವಿದೆ. ಅಲ್ಲದೆ ಈ ಕುರಿತು ಕಳೆದ 2011ರಲ್ಲಿ ಅಂದಿನ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಸಲ್ಲಿಸಿದ್ದ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಲೋಕಾಯುಕ್ತ ಎಸ್‌ಐಟಿ ತನಿಖೆ ಮುಂದುವರೆಸಿದೆ.
ರೆಡ್ಡಿ ಮೇಲಿನ ಆರೋಪ ಏನು..?
ಅಲ್ಲದೆ ರಾಜ್ಯಪಾಲರು ವಾಪಸ್ ಕಳುಹಿಸಿರುವ ಕಡತದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ಧನ ರೆಡ್ಡಿಯವರಿಗೆ ಸೇರಿರುವ ಫೈಲ್ ಕೂಡ ಅದರಲ್ಲಿದೆ. ತಾವು ಗಳಿಕೆ ಮಾಡಬೇಕಿದ್ದ ಆದಾಯವನ್ನು ಮೀರಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಶಾಸಕ ಜನಾರ್ಧನ ರೆಡ್ಡಿ ಅವರ ಮೇಲಿದೆ.