ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ದಾರೆ. ಅತ್ತ ನೂತನ ಕೋಚ್ ಆಗಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಲು ಗೌತಮ್ ಗಂಭೀರ್ ರೆಡಿಯಾಗಿದ್ದಾರೆ. ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಟೀಮ್ ಇಂಡಿಯಾಗೆ ಕೋಚ್ ಆಗಲು ಹೊರಟಿದ್ದರೆ, ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದ್ರಾವಿಡ್ ಅವರನ್ನು ಕೆಕೆಆರ್ ತಂಡ ಮೆಂಟರ್ ಮಾಡೋಕೆ ಬಲು ಉತ್ಸಾಹ ತೋರುತ್ತಿರುವುದು ವಿಶೇಷವಾಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿಯು ಟೀಮ್ ಇಂಡಿಯಾದ ಮಾಜಿ ಕೋಚ್ ದ್ರಾವಿಡ್ ಅವರನ್ನು ಮೆಂಟರ್ ಹುದ್ದೆಗಾಗಿ ಸಂಪರ್ಕಿಸಿದೆ. ಹಾಗಿದ್ರೆ, ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕೆಕೆಆರ್ ಮೆಂಟರ್ ಆಗ್ತಾರಾ? ಅಥವಾ ಬೇರೆ ಐಪಿಎಲ್ ತಂಡಕ್ಕೆ ಕೋಚ್ ಆಗ್ತಾರಾ? ದ್ರಾವಿಡ್ ಅವರನ್ನು ಮೆಂಟರ್ ಆಗಿ ನೇಮಿಸಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು ದ್ರಾವಿಡ್ ನಿರ್ಧಾರವೇನು ಎನ್ನುವ ಪ್ರಶ್ನೆಗೆ ಸದ್ಯದಲ್ಲೆ ಉತ್ತರ ಸಿಗಲಿದೆ.
ಈ ಹಿಂದೆ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಯಶಸ್ಸಿಗೆ ಕಾರಣರಾಗಿದ್ದರು. ಇದೇ ಕಾರಣಕ್ಕೆ ದ್ರಾವಿಡ್ ಅವರನ್ನು ಮೆಂಟರ್ ಆಗಿ ನೇಮಿಸಲು ಕೆಕೆಆರ್ ಹೆಚ್ಚಿನ ಆಸಕ್ತಿ ತೋರುತ್ತಿದೆ. 2021ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ದ್ರಾವಿಡ್ ಆಯ್ಕೆಯಾಗಿದ್ದರು ಮತ್ತು ಅವರ ಸಮಯದಲ್ಲಿ ತಂಡದ ಅದ್ಭುತ ಯಶಸ್ಸಿಗೆ ಕಾರಣರಾಗಿದ್ದರು. ಅವರ ಕೋಚಿಂಗ್ ಅವಧಿಯಲ್ಲಿ ಒಟ್ಟು 56ಓಡಿಐ ಪಂದ್ಯಗಳನ್ನು ಆಡಿದ ಟೀಂ ಇಂಡಿಯಾ 41ರಲ್ಲಿ ಗೆಲುವು ಸಾಧಿಸಿದ್ರೆ, 69 ಟಿ-20ಯಲ್ಲಿ 48ರಲ್ಲಿ ಜಯಗಳಿಸಿದೆ. ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಕೇವಲ ಒಂದು ಸರಣಿ ಮಾತ್ರ ಸೋತಿದ್ರೆ, 5ರಲ್ಲಿ ಗೆಲುವು ಸಾಧಿಸಿ 2ರಲ್ಲಿ ಡ್ರಾ ಸಾಧಿಸಿದೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 89 ಪಂದ್ಯಗಳನ್ನಾಡಿರುವ ರಾಹುಲ್, 2014 ಮತ್ತು 2015 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಭರ್ಜರಿ ಬೇಡಿಕೆ ಹೊಂದಿರುವ ದ್ರಾವಿಡ್, ಕೆಕೆಆರ್ ಮಾಲೀಕ ಶಾರುಕ್ ಖಾನ್ ಅವರ ಆಫರ್ ಒಪ್ಪಿದರೆ ಐಪಿಎಲ್ 2025 ರಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ದ್ರಾವಿಡ್ ಆಯ್ಕೆಯಾಗಲಿದ್ದಾರೆ.