ರಾಯಚೂರು : ಆಕೆ ಅದೆಷ್ಟೋ ಮಕ್ಕಳನ್ನು ತಿದ್ದಿ ತೀಡಿ, ಮಕ್ಕಳ ಭವಿಷ್ಯವನ್ನ ರೂಪಿಸಿದ್ದ ಶಿಕ್ಷಕಿ. ಆಕೆಯ ಗಂಡ ಮಾಡಿದ ಆ ಒಂದು ತಪ್ಪಿಗೆ ಈಗ,ಆ ಶಿಕ್ಷಕಿ ಯ ಸಾಂಸಾರಿಕ ಬದುಕೇ ಬೀದಿ ಪಾಲಾಗಿದೆ. ಹೌದು. ಹೀಗೆ ರಾಯಚೂರು (Raichur) ಜಿಲ್ಲೆ ದೇವದುರ್ಗ ಪಟ್ಟಣವೇ (Devadurga town) ದಂಗಾಗಿ ಹೋಗುವಂತೆ ಬಿಕ್ಕಿಬಿಕ್ಕಿ ಅಳುತ್ತಿರೊ ಈಕೆ ಹೆಸ್ರು ಶಾಂತಾಬಾಯಿ (shanthabai). ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿ (Government teacher). ಸ್ಥಳೀಯ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಪಾಠ ಹೇಳ್ಬೇಕಿದ್ದ ಟೀಚರ್ ಶಾಂತಾಬಾಯಿ, ದೇವದುರ್ಗ ಪಟ್ಟಣದ ಪತಿ ಪ್ರತಾಪ್ ಮನೆ ಎದುರು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ನನಗೆ ಗಂಡ ಬೇಕು.ನನಗೆ ನ್ಯಾಯ ಕೊಡ್ಸಿ ಅಂತ ಪತಿ ಪ್ರತಾಪ್ (husband Pratap) ಮನೆ ಎದುರು ಧರಣಿ ಕೂತು ನ್ಯಾಯಕ್ಕಾಕಿ ಅಂಗಲಾಚಿದ್ದಾರೆ. ಆಕೆ ಬರ್ತಿದ್ದಂತೆಯೇ ಪ್ರತಾಪ್ ಮನೆಯವರು ಗೇಟ್ ಬೀಗ ಹಾಕಿಕೊಂಡು, ಕಳ್ಳನ ಮನಸ್ಸು ಹುಳ್ಳಗೆ ಅನ್ನೋ ಹಾಗೇ ಗೇಟ್ ಒಳಗಡೆಯಿಂದಲೇ ಶಿಕ್ಷಕಿ ಶಾಂತಾಬಾಯಿ ವಿರುದ್ಧ ಹರಿಹಾಯ್ದರು. ಆಗ ಅಕ್ಷರಶಃ ರೊಚ್ಚಿಗೆದ್ದ ಶಾಂತಾಬಾಯಿ, ಕೈಯಲ್ಲಿ ಕಲ್ಲನ್ನು ಹಿಡಿದುಕೊಂಡು ಗೇಟ್ಗೆ ಹಾಕಿದ್ದ ಬೀಗ ಒಡೆಯೋಕೆ ಯತ್ನಿಸಿದ್ರು. ಅಷ್ಟೇ ಅಲ್ಲ, ಪತಿ ಪ್ರತಾಪ್ ಎಲ್ಲಿದ್ದಾನೆ. ನನಗೆ ನನ್ನ ಗಂಡ ಬೇಕು ಅಂತ ರೌದ್ರಾವತಾರವನ್ನೇ ತಾಳಿದ್ರು ಶಾಂತಾಬಾಯಿ. ಶಾಂತಾಬಾಯಿಗೆ ಗೊತ್ತಿಲ್ಲದ ಹಾಗೇ ಪತಿ ಪ್ರತಾಪ್ ಎರಡನೇ ಮದುವೆ ಮಾಡಿಕೊಂಡಿದ್ದಾರಂತೆ. ಈ ಹಿಂದೆ ಶಿಕ್ಷಕಿ ಶಾಂತಾಬಾಯಿ ಪತಿ ಪ್ರತಾಪ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ರು. ಆಗ ಶಾಂತಾಬಾಯಿ ಹಾಗೂ ಪ್ರತಾಪ್ ನಡುವೆ ಪ್ರೇಮಾಂಕುರವಾಗಿ, ಮದುವೆ ವರೆಗೂ ಬಂದಿತ್ತು. ಆದ್ರೆ ಅಂತರ್ಜಾತಿ ವಿವಾಹ ಅನ್ನೋ ಕಾರಣಕ್ಕೆ ಎರಡು ಕುಟುಂಬಸ್ಥರು ಮದುವೆಗೆ ಒಪ್ಪಿರ್ಲಿಲ್ಲ. ಆಗ ಪ್ರತಾಪ್ ಹಾಗೂ ಶಿಕ್ಷಕಿ ಶಾಂತಾಬಾಯಿ ಬೆಂಗಳೂರಿನ ಪೀಣ್ಯದಲ್ಲಿ ಮ್ಯಾರೇಜ್ ರೆಜಿಸ್ಟ್ರೇಶನ್ (Marriage Registration) ಮಾಡಿಸಿದ್ದಾರೆ. ಆ ದಾಖಲಾತಿಯಲ್ಲಿ 2017ರ ಅಕ್ಟೊಬರ್ 6 ರಂದು ಮದುವೆಯಾಗಿದ್ದಾಗಿ ದೃಢೀಕರಿಸಲಾಗಿದೆ. ಇದಾದ ಬಳಿಕ ಹನಿಮೂನ್ ಅಂತೆಲ್ಲಾ ಇಬ್ಬರು ಎಲ್ಲ ಕಡೆ ಸುತ್ತಾಡಿದ್ದಾರೆ.ಕೊನೆಗೆ ಪತ್ನಿ ಶಾಂತಾಬಾಯಿಗೆ ಗೊತ್ತಿಲ್ಲದ ರೀತಿ, 2018 ರ ಫೇಬ್ರವರಿ 25 ರಂದು ಪ್ರತಾಪ್ ಎರಡನೇ ಮದುವೆಯಾಗಿರೊದಾಗಿ ಮೊದಲ ಪತ್ನಿ ಶಾಂತಾಬಾಯಿ ಆರೋಪಿಸಿದ್ದಾರೆ. ಹೀಗೆ ಪತಿ ಪ್ರತಾಪ್ ಅನ್ಯಾಯ ಮಾಡಿದ್ದಾರೆ ಅಂತ ಶಾಂತಾಬಾಯಿ ದೇವದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ರು. ಇದಾದ ಬಳಿಕವೂ ಪ್ರತಾಪ್,ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ ಅಂತ ಶಾಂತಾಬಾಯಿ ಆರೋಪಿಸಿದ್ದಾರೆ. ಈ ಮಧ್ಯೆ, ನಿನ್ನೆ ನನ್ನನ್ನು ಮನೆಗೆ ಸೇರಿಸಿ,ಎರಡನೇ ಪತ್ನಿ ಜೊತೆ ನಾನೂ ಇರ್ತಿನಿ ಅಂತ ನ್ಯಾಯಕೇಳಲು ಹೋದಾಗ ಮನೆ ಗೇಟ್ ಹಾಕಿ ಅವಮಾನಿಸಿದ್ದಾರೆ ಅಂತ ಶಾಂತಾಬಾಯಿ ಆರೋಪಿಸಿದ್ದಾರೆ. ಈ ಬಗ್ಗೆ ಪತಿ ಪ್ರತಾಪ್ ತಂದೆ ಶಂಕ್ರಪ್ಪ ಹೇಳೋದೇ ಬೇರೆ, ನನ್ನ ಮಗ ಆಕೆ ಜೊತೆ ನಮಗೆ ಗೊತ್ತಿಲ್ಲದ ಹಾಗೇ ಮದುವೆಯಾಗಿದ್ದಾನೆ. ನಾವೂ ಸಾವಿರಾರು ಜನರ ಸಮ್ಮುಖದಲ್ಲಿ ಬೇರೆ ಮದುವೆ ಮಾಡಿಸಿದ್ದೇವೆ. ಆತನನ್ನು ಮನೆ ಬಿಟ್ಟು ಹೊರ ಹಾಕಿದ್ದೇವೆ. ಆತ ಎಲ್ಲಿದ್ದಾನೋ ಗೊತ್ತಿಲ್ಲ ಅಂತ ಜಾರಿಕೊಳ್ಳೊ ಯತ್ನ ಮಾಡಿದ್ರು. ಇವೆಲ್ಲದರ ಮಧ್ಯೆ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ, ಶಾಂತಾಬಾಯಿ ದೇವದುರ್ಗ ಠಾಣೆಯಲ್ಲಿ ಪತಿ ಪ್ರತಾಪ್ ಹಾಗು ಆತನ ಕುಟುಂಬಸ್ಥರ ವಿರುದ್ಧ ಮತ್ತೊಂದು ಕೇಸ್ ದಾಖಲಿಸಿದ್ದಾರೆ. ಇಷ್ಟೆಲ್ಲಾ ಅನಾಹುತವಾಗ್ತಿದ್ರು ಪತಿ ಪ್ರತಾಪ ಮಾತ್ರ ಪ್ರತ್ಯಕ್ಷನಾಗ್ತಿಲ್ಲ. ನೊಂದ ಮೊದಲ ಪತ್ನಿ ಶಾಂತಾಬಾಯಿಗೆ ಕನಿಷ್ಟ ಸಮಾಧಾನ ಮಾಡೋ ಸೌಜನ್ಯವನ್ನೂ ತೋರಿಸ್ತಿಲ್ಲ. ಅದೆನೇ ಇರ್ಲಿ,ಶಿಕ್ಷಕಿ ಶಾಂತಾಬಾಯಿ ನ್ಯಾಯಕ್ಕಾಗಿ ಕಾನೂನಿನ ಕದ ತಟ್ಟಿದ್ದು, ಅಲ್ಲಿ ಮುಂದೇನಾಗುತ್ತೊ ಕಾದು ನೋಡಬೇಕಿದೆ.