Rain Alert: ಜುಲೈ ತಿಂಗಳು ಆರಂಭವಾದರೂ ರಾಜ್ಯದಲ್ಲಿ ಮಳೆ ಮಾತ್ರ ನಿರೀಕ್ಷೆಯಂತೆ ಚುರುಕಾಗಿಲ್ಲ. ಕರಾವಳಿ ಮತ್ತು ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮುಂದಿನ ಒಂದು ವಾರವೂ ಭಾರೀ ಮಳೆಯ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ರೈತರು ಜುಲೈನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರೂ, ಮುಂಗಾರು ಇನ್ನೂ ಚುರುಕು ಪಡೆದಿಲ್ಲ. ಸದ್ಯ ಕರಾವಳಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಹಗುರ ಮಳೆ ಅಥವಾ ಒಣಹವೆಯೇ ಮುಂದುವರಿಯಲಿದೆ. ಜುಲೈ 3ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದೇ ಮುನ್ಸೂಚನೆ ಜುಲೈ 4ಕ್ಕೂ ಮುಂದುವರಿಯಲಿದೆ.
ಜುಲೈ 5 ಮತ್ತು 6ರಂದು ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಮತ್ತೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೊಂದೆಡೆ, ಬೆಂಗಳೂರು ಸೇರಿದಂತೆ ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜುಲೈ 8ರವರೆಗೆ ಹಗುರದಿಂದ ಸಾಧಾರಣ ಮಳೆಯಷ್ಟೇ ಸುರಿಯುವ ಮುನ್ಸೂಚನೆ ಇದೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಭಾರೀ ಮಳೆ ಮುಂದುವರಿದಿದ್ದು, ಗುಡ್ಡ ಕುಸಿತ ಹಾಗೂ ಮನೆ ಕುಸಿತದ ಘಟನೆಗಳು ವರದಿಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ರಾಜ್ಯದಾದ್ಯಂತ ವ್ಯಾಪಕ ಮಳೆಯ ನಿರೀಕ್ಷೆ ಇನ್ನೂ ಈಡೇರದಿರುವುದು ರೈತರ ಆತಂಕ ಹೆಚ್ಚಿಸಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಾತ್ರ ಮಳೆ ಚುರುಕಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಮಳೆಯ ಕೊರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.




