National News: ಅಯೋಧ್ಯೆ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಮನ ಪೂಜೆಯಲ್ಲಿ ಭಾಗಿಯಾಗಿ, ಪೂಜೆಯನ್ನು ನೆರವೇರಿಸಿದ್ದು, ರಾಮಮಂದಿರವನ್ನು ಉದ್ಘಾಟಿಸಿದ್ದಾರೆ.
ಪ್ರಧಾನ ಅರ್ಚಕರು ಸೇರಿ ಹಲವು ಪುರೋಹಿತರು, ರಾಮಲಲ್ಲಾನ ಪ್ರಾಣಪ್ರತಿಷ್ಠಾನೆ ಮಾಡಿದ್ದು, 5 ದಶಕಗಳ ಶುಭಘಳಿಗೆಯ ಕಾಯುವಿಕೆ ಪೂರ್ತಿಯಾಗಿದೆ. ಈ ಮೂಲಕ ಬಾಲರಾಮ ಅಯೋಧ್ಯಾ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ.
ಎಲ್ಲ ರಾಮಭಕ್ತರ ಪ್ರತಿನಿಧಿಯಾಗಿ, ಯಜಮಾನಿಕೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಾಗಣಪತಿಗೆ ಪ್ರಥಮ ಪೂಜೆ ನೆರವೇರಿಸಿದರು. ಬಳಿಕ ರಾಮನ ಪ್ರಾಣಪ್ರತಿಷ್ಠೆ ಕಾರ್ಯದಲ್ಲಿ ಭಾಗಿಯಾದರು. 60 ವರ್ಷಕ್ಕೊಮ್ಮೆ ಬರುವ ಅಭಿಜೀತ್ ಮುಹೂರ್ತದಲ್ಲಿ ಈ ಕಾರ್ಯವನ್ನು ನೆರವೇರಿಸಲಾಗಿದೆ. ಪ್ರಧಾನಿ ಮೋದಿ ಜೊತೆ ಈ ಕಾರ್ಯದಲ್ಲಿ, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಾಗವತ್ ಸೇರಿ ಹಲವು ಅರ್ಚಕರು ಭಾಗಿಯಾಗಿದ್ದರು.
ನಾಸಿಕ್‌ನ ಕಾಲಾರಾಮ್ ದೇವಸ್ಥಾನಕ್ಕೆ ಭೇಟಿ ನೀಡಿ, 11 ದಿನಗಳ ವೃತಾಚರಣೆಯಲ್ಲಿದ್ದ ಪ್ರಧಾನಿ ಮೋದಿ, ಎಳನೀರಿನ ಸೇವನೆ ಮಾಡಿ, ನೆಲದ ಮೇಲೆ ಮಲಗುತ್ತಿದ್ದರು. ಅಲ್ಲದೇ, ದಕ್ಷಿಣದಲ್ಲಿರುವ ಹಲವು ರಾಮನ ದೇವಸ್ಥಾನಗಳಿಗೆ ಪ್ರಧಾನಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ರಾಮ ರಾವಣನ ಸಂಹಾರ ಮಾಡಿ, ಬ್ರಹ್ಮಹತ್ಯಾದೋಷಕ್ಕಾಗಿ, ಶಿವನ ಪೂಜೆ ಮಾಡಲು ದಕ್ಷಿಣಕ್ಕೆ ಬರುತ್ತಾನೆ. ಆ ಸ್ಥಳವೇ ರಾಮೇಶ್ವರಂ. ಪ್ರಧಾನಿ ಮೋದಿ ಈ ಸ್ಥಳಕ್ಕೂ ಭೇಟಿ ನೀಡಿ, ರಾಮ ಸೇತುವೆಗೆ ಪೂಜೆ ಸಲ್ಲಿಸಿದರು. ಬಳಿಕ ಅಯೋಧ್ಯೆಗೆ ಬಂದ ಮೋದಿ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದ್ದಾರೆ. ಈ ಮೂಲಕ ಹಲವು ದಶಕಗಳಿಂದ ಕಾಯುತ್ತಿದ್ದ ರಾಮಭಕ್ತರ ರಾಮಮಂದಿರದ ಕನಸು ನನಸಾಗಿದೆ.