Thursday, July 10, 2025

Latest Posts

IPL​ಗೆ ಹೊಸ ಕಿಂಗ್ RCB! 18 ವರ್ಷ – ಐತಿಹಾಸಿಕ ಜಯ! ಹೇಗಿತ್ತು ಕಪ್ ಪಡೆಯುವ ಹೋರಾಟ..?

- Advertisement -

Sports News: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ರಾತ್ರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಕಿರೀಟ ಧರಿಸುತ್ತಿದ್ದಂತೆಯೇ ದೇಶದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಉಕ್ಕಿ ಹರಿದಿದೆ. ಸತತ ಹದಿನೆಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದ ಲಕ್ಷಾಂತರ ಜನರು ಬೀದಿಗಿಳಿದು ಸಂಭ್ರಮಿಸಿದರು. ಕುಣಿದು, ಪರಸ್ಪರ ಸಿಹಿ ಹಂಚಿ ರಾತ್ರಿಯಿಡೀ ಜಯಘೋಷಗಳನ್ನು ಕೂಗುತ್ತ ಆರ್​ಸಿಬಿ ಆರ್​ಸಿಬಿ ಎಂಬ ಹರ್ಷೋದ್ಘಾರಗಳು ಮುಗಿಲು ಮುಟ್ಟಿದ್ದವು.

ಮೂರು ಬಾರಿ ಫೈನಲ್ ತಲುಪಿ ನಿರಾಸೆಗೊಂಡಿದ್ದ ಆರ್​ಸಿಬಿ..!

ಇನ್ನೂ ಪ್ರಮುಖವಾಗಿ ಐಪಿಎಲ್ ಶುರುವಾದಾಗಿನಿಂದಲೂ ಮೂರು ಬಾರಿ ಫೈನಲ್ ತಲುಪಿದ್ದ ಆರ್​ಸಿಬಿಗೆ ಪ್ರಶಸ್ತಿಯ ಭಾಗ್ಯ ಒಲಿದು ಬಂದಿರಲಿಲ್ಲ ತಂಡವು ನಿರಾಸೆಗೊಂಡಿತ್ತು. ಆದರೆ ಈ ಸಲ ಐಪಿಎಲ್ ಕಪ್ ನಮ್ಮ ಆರ್​ಸಿಬಿಯ ಕೈ ತಪ್ಪಲಿಲ್ಲ. ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್​ಗಳಿಂದ ಸೋಲಿಸಿದ ಆರ್​ಸಿಬಿ ಚಾಂಪಿಯನ್ ಪಟ್ಟಕ್ಕೇರಿದೆ.

ಈ ಹಿಂದೆ ಆರ್​ಸಿಬಿಯಲ್ಲಿ ಆಡಿದ್ದ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್​ ಅವರೂ ಕ್ರೀಡಾಂಗಣದಲ್ಲಿ ಹಾಜರಿದ್ದು, ತಂಡಕ್ಕೆ ಹುರಿದುಂಬಿಸಿದರು. ತಮ್ಮ ಪ್ರೀತಿಯ ಗೆಳೆಯ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಅಭಿನಿಂದಿಸಿದರು. ಈ ವೇಳೆ ಭಾವುಕರಾದ ಕೊಹ್ಲಿಯ ಕಂಗಳು ತೇವಗೊಂಡವು.

ಎರಡು ದಿನಗಳ ಹಿಂದಷ್ಟೇ ಮುಂಬೈ ಮಣಿಸಿದ್ದ ಪಂಜಾಬ್ ಕಿಂಗ್ಸ್..

ಪಂಜಾಬ್, ಎರಡು ದಿನಗಳ ಹಿಂದಷ್ಟೇ ಎರಡನೇ ಕ್ವಾಲಿಫೈಯರ್​ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ ತಂಡವನ್ನು ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಆ ಪಂಧ್ಯದಲ್ಲಿ ಶ್ರೇಯಸ್ ಅಯ್ಯರ್ ಅಬ್ಬರಿಸಿದ ರೀತಿಯನ್ನು ನೋಡಿದವರಿಗೆ ಆರ್​ಸಿಬಿಯ ಗೆಲವು ಸುಲಭವಲ್ಲ ಎಂಬ ಭಾವ ಮೂಡಿತ್ತು. ಆದರೆ ಅಂತಿಮವಾಗಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ಕೂಡ ಉತ್ತಮ ಪ್ರದರ್ಶನ ನೀಡಿತು. ಆದರೆ ಟಾಸ್​ ಗೆದ್ದ ಬಳಿಕವೂ ಅಭಿಮಾನಿಗಳ ಮನದಲ್ಲಿ ಆತಂಕ ಮನೆ ಮಾಡಿತ್ತು. ಅದಕ್ಕೆ ತಕ್ಕಂತೆ ಪಂಜಾಬ್ ತಂಡದ ಕೈಲ್ ಜೆಮಿಸನ್ 48 ಎಸೆತಕ್ಕೆ 3 ವಿಕೆಟ್ ಹಾಗೂ ಎಡಗೈ ವೇಗಿ ಅರ್ಷದೀಪ್ ಸಿಂಗ್ 40 ಎಸೆತಕ್ಕೆ 3 ವಿಕೆಟ್​ ಕಬಳಿಸುವ ಮೂಲಕ ಆರ್​ಸಿಬಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಇದರ ನಡುವೆಯೂ ಬೆಂಗಳೂರು ತಂಡವು 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್​ಗಳನ್ನು ಬಾಚಿಕೊಂಡಿತು.

ಇನ್ನೂ ಪಂಜಾಬ್ ತಂಡದಲ್ಲಿರುವ ಪ್ರತಿಭಾವಂತ ಮತ್ತು ಇನ್​ಫಾರ್ಮ್​ ಬ್ಯಾಟರ್​ಗಳಿಗೆ ಈ ಮೊತ್ತ ದೊಡ್ಡ ಸವಾಲಾಗಿರಲಿಲ್ಲ. ಆದರೆ ಆರ್​ಸಿಬಿಯ ಸ್ಪಿನ್ನರ್ ಕೃಣಾಲ್ ಪಾಂಡ್ಯ ಮತ್ತು ವೇಗಿ ಭುವನೇಶ್ವರ್ ಕುಮಾರ್ ಕಿಂಗ್ಸ್​ಗೆ ತಡೆಯೊಡ್ಡಿದರು. ಪ್ರಭಸಿಮ್ರನ್ ಸಿಂಗ್ 26 ರನ್ ಮತ್ತು ಜೋಶ್ ಇಂಗ್ಲಿಸ್ 39 ರನ್​ ಗಳಿಸಿದರು. ಹೀಗೆ ಇವರು ವಿಕೆಟ್ ಗಳಿಸಿದ್ದ ಕೃಣಾಲ್ ಗೆಲುವಿನ ರೂವಾರಿಯಾದರು. ಶ್ರೇಯಸ್ ಅಯ್ಯರ್ 1 ರನ್​ಗೆ ರೊಮೆಯೊ ಶೆಫರ್ಡ್ ಪೆವಿಲಿಯನ್ ದಾರಿ ತೋರಿಸಿದ್ದು ಮಹತ್ವದ ತಿರುವಾಯಿತು.

ಆರ್​ಸಿಬಿ ಬಳಗದಲ್ಲಿ ಮುಗಿಲು ಮುಟ್ಟಿದ ಜಯದ ಸಂಭ್ರಮ..

ಆದರೆ ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ದಿಟ್ಟ ಆಟವಾಡಿದ್ದ ಶಶಾಂಕ್ ಸಿಂಗ್ ಅಜೇಯರಾಗಿ ಆಟವಾಡಿದರು. ಹೀಗೆ ಇವರು ಕೊನೆಯ ಹಂತದಲ್ಲಿ ಅಬ್ಬರಿಸಿದರು. ಅದರಲ್ಲೂ ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ 29 ರನ್​ಗಳು ಬೇಕಿದ್ದಾಗಲೂ ಅವರು ಕ್ರೀಸ್​ನಲ್ಲಿದ್ದು ಭರವಸೆ ಮೂಡಿಸಿದ್ದರು. ಜೋಶ್ ಹ್ಯಾಜಲ್​ವುಡ್ ಹಾಕಿದ ಆ ಓವರ್​ನಲ್ಲಿ ಶಶಾಂಕ್ 3 ಸಿಕ್ಸರ್​ ಮತ್ತು ಒಂದು ಬೌಂಡರಿ ಹೊಡೆದರು. ಆದರೆ ಅವರ ಪ್ರಯತ್ನಕ್ಕೆ ಗೆಲುವು ಒಲಿಯಲಿಲ್ಲ. ಆದರೆ ಆರ್​ಸಿಬಿ ಬಳಗದಲ್ಲಿ ಜಯದ ಸಂಭ್ರಮ ಗರಿಗೆದರಿ ಮುಗಿಲು ಮುಟ್ಟಿತ್ತು.

ಈ ಸಲ ಕಪ್ ನಮ್ದೆ ಎಂದ ರಜತ್ ಪಾಟೀದಾರ್..

ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿಯು ಅತ್ಯಂತ ಶಿಸ್ತಿನ ಆಟವಾಡಿತು. ಲೀಗ್ ಹಂತದ 14 ಪಂದ್ಯಗಳಲ್ಲಿ 9ರಲ್ಲಿ ಜಯಿಸಿದ್ದ ತಂಡವು 4ರಲ್ಲಿ ಸೋತಿತ್ತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಕ್ವಾಲಿಫೈಯರ್​ನಲ್ಲಿ ಪಂಜಾಬ್ ಕಿಂಗ್ಸ್ ಎದುರು ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿತ್ತು.ಪಂದ್ಯದ ಬಳಿಕ ಮಾತನಾಡಿದ ತಂಡದ ನಾಯಕ ರಜತ್ ಪಾಟೀದಾರ್ ಈ ಸಲ ಕಪ್ ನಮ್ದು ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ. ಈ ಮೂಲಕ ಸತತ 18 ವರ್ಷಗಳ ಹೋರಾಟದ ಬಳಿಕ ಅಂತಿಮವಾಗಿ ಆರ್​ಸಿಬಿಯು 2025ರ ಐಪಿಯಲ್ ಟ್ರೋಫಿಗೆ ಮುತ್ತಿಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಎಲ್ಲ ಕನ್ನಡಿಗರು ಹಾಗೂ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು, ಇದೀಗ ಆರ್​ಸಿಬಿ ತಂಡಕ್ಕೆ ಶುಭಾಶಗಳ ಮಹಾಪೂರವೇ ಹರಿದು ಬರುತ್ತಿದೆ.

- Advertisement -

Latest Posts

Don't Miss