ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಒಬ್ಬರಾಗಿದ್ದ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಇಂದು ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಪಡೆದುಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರವನ್ನು ಮೂಡಿಸಿದ್ದಾರೆ. ಯಾವುದೇ ಮುನ್ಸೂಚನೆಯನ್ನೂ ನೀಡದೆ ಎಬಿ ಡಿವಿಲಿಯರ್ಸ್ ದಿಢೀರನೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವುದರ ಮೂಲಕ ಬೇಸರ ತಂದಿದ್ದಾರೆ.
ಅಂತಾರರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಎಬಿ ಡಿವಿಲಿಯರ್ಸ್ 2017ರಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು 2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು.
ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ 3 ವರ್ಷಗಳ ಹಿಂದೆಯೇ ನಿವೃತ್ತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು. ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಹಲವಾರು ವರ್ಷಗಳಿಂದ ಬೆಂಗಳೂರು ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದರು.
ಇನ್ನು ಎಬಿ ಡಿ ವಿಲಿಯರ್ಸ್ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರನಾದರೂ ಸಹ ವಿಶ್ವದ ಮೂಲೆ ಮೂಲೆಯಲ್ಲಿ ಎಬಿ ಡಿವಿಲಿಯರ್ಸ್ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು. ಎಬಿ ಡಿವಿಲಿಯರ್ಸ್ ಸ್ಫೋಟಕ ಆಟಕ್ಕೆ ಮನ ಸೋಲದ ಕ್ರಿಕೆಟ್ ಅಭಿಮಾನಿಗಳು ಯಾರೂ ಸಹ ಇರಲಿಲ್ಲ. ಅದರಲ್ಲಿಯೂ ಭಾರತದಲ್ಲಿ ಎಬಿ ಡಿವಿಲಿಯರ್ಸ್ ಅವರಿಗೆ ಅಪಾರವಾದ ಅಭಿಮಾನಿ ಬಳಗವಿತ್ತು. ಅದಕ್ಕೂ ಮಿಗಿಲಾಗಿ ಕರ್ನಾಟಕದಾದ್ಯಂತ ಎಬಿ ಡಿವಿಲಿಯರ್ಸ್ ಅವರಿಗೆ ಅಭಿಮಾನಿ ಬಳಗದ ಜೊತೆ ಹೃದಯ ತುಂಬಿ ಪ್ರೀತಿಸುವ ಅಭಿಮಾನಿಗಳು ಕೂಡ ಇದ್ದರು. ಇದಕ್ಕೆ ಮೂಲ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಹೌದು, 2011ನೇ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯನಾಗಿದ್ದ ಎಬಿ ಡಿವಿಲಿಯರ್ಸ್ ಈ ಒಂದು ದಶಕದಲ್ಲಿ ಗಳಿಸಿದ ಅಭಿಮಾನಿಗಳ ಸಂಖ್ಯೆ ಅಪಾರ. ಹೀಗಾಗಿ ಎಬಿ ಡಿವಿಲಿಯರ್ಸ್ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳು ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿರುವುದು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ತಂಡದ ಅಭಿಮಾನಿಗಳಲ್ಲಿ ಬೇಸರವನ್ನುಂಟುಮಾಡಿರುವುದು ನಿಜ.