ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯೆ ಸಂಧ್ಯಾ ನಿಧನರಾಗಿದ್ರು. ಸದ್ಯ ಆಕೆ ಅಂಗಾಗ ದಾನದ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ.
ಹೌದು ದೇವನಹಳ್ಳಿ ಮೂಲದ ಸಂಧ್ಯಾ ವೈದ್ಯೆ ಆಗಿದ್ದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಕ್ರಿಟಿಕಲ್ ಕೇರ್ ತಂಡ ಸತತ ಪ್ರಯತ್ನ ಪಟ್ಟರೂ ಕೂಡ ಮೆದುಳು ನಿಷ್ಕ್ರೀಯಗೊಂಡಿತ್ತು. ಹೀಗಾಗಿ ಆಕೆಯ ದೇಹದ ಅಂಗಾಂಗಳನ್ನು ಹಾಗೂ ದೇಹವನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೂಲತಃ ಬೆಂಗಳೂರಿನವರಾದ ವೈದ್ಯ ಸಂಧ್ಯಾ ಕುಟುಂಬಸ್ಥರು ಕೋಲಾರದ ಕೆಜಿಎಫ್ನಲ್ಲಿ ವಾಸವಾಗಿದ್ದರು.
ಸಂಧ್ಯಾ ಬಂಗಾರಪೇಟೆ ತಾಲೂಕು ಬೂದಿಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯ ಸಂಧ್ಯಾ ಅವರು ಕೆಜಿಎಫ್ನಿಂದ ಬೂದಿಕೋಟೆ ಮೆಡಿಕಲ್ ಕಾಲೇಜಿಗೆ ನಿತ್ಯ ಬಸ್ನಲ್ಲಿ ಹೋಗುತ್ತಿದ್ದರು. ಆದರೆ, ಡಿಸೆಂಬರ್ 6 ರಂದು ಬಸ್ ಮಿಸ್ ಆಗಿದ್ದರಿಂದ ತಂದೆಯೊಂದಿಗೆ ಬೈಕ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಗಾಜಗ ಗ್ರಾಮದ ಬಳಿ ಅವೈಜ್ಞಾನಿಕ ಸ್ಪೀಡ್ ಹಂಪ್ ದಾಟುವ ವೇಳೆ ಬೈಕ್ ನಿಂದ ಬಿದ್ದು ಸಂಧ್ಯಾ ಅವರ ತಲೆಗೆ ಗಾಯವಾಗಿತ್ತು. ಕೂಡಲೆ ಅವರನ್ನು ಕೋಲಾರದ ಜಾಲಪ್ಪ ಹಾಗೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಣಿಪಾಲ್ ಆಸ್ಪತ್ರೆಗೆ ಆಕೆಯ ಶ್ವಾಸಕೋಶ, ಮೂತ್ರಪಿಂಡ, ಕಾರ್ನಿಯ, ಹೃದಯ ಕವಾಟ ಚರ್ಮ ಮತ್ತು ಅಂಗಾಂಗಗಳನ್ನ ದಾನ ಮಾಡಲಾಗಿದ್ದು, ಕೋಲಾರದ ಜಾಲಪ್ಪಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ದೇಹದಾನ ಮಾಡಲಾಗಿದೆ. ಈ ಮೂಲಕ ಸಂಧ್ಯಾ ಕುಟುಂಬದವರು ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ.
ಸಂಧ್ಯಾ ಅವರು ಕಳೆದ 11 ತಿಂಗಳಿಂದ ಬೂದಿಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಸೇವೆಯಿಂದಲೇ ಸಂಧ್ಯಾ ಅವರು ಜನರ ಪ್ರೀತಿ ಗಳಿಸಿದ್ದರು. ಸದ್ಯ ಮಣಿಪಾಲ ಆಸ್ಪತ್ರೆಯ ಡಾ.ಸುನಿಲ್ ಕಾರಂತ್ ,ಸಂಧ್ಯಾರ ಅಂಗಾಂಗ ದಾನ ಇತರರನ್ನು ಪ್ರೇರಪಿಸಲಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

