ಉಕ್ರೇನ್ ಮತ್ತು ರಷ್ಯಾ (Ukraine and Russia) ನಡುವೆ ನಡೆಯುತ್ತಿರುವ ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಉಕ್ರೇನ್ ರಾಷ್ಟ್ರದಾದ್ಯಂತ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ (A ceasefire has been announced). ಈ ಕದನ ವಿರಾಮದ ಬಗ್ಗೆ ರಷ್ಯಾ ವಿದೇಶಾಂಗ ಸಚಿವಾಲಯವು (Russian Foreign Ministry) ಮಾಹಿತಿ ನೀಡಿದೆ. ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ನಿರಂತರ ಆಕ್ರಮಣ ನಡೆಸುತ್ತಿದ್ದ ರಷ್ಯಾ ಶನಿವಾರ ಕದನ ವಿರಾಮ ಘೋಷಿಸಿದೆ. ಉಕ್ರೇನ್ ನೆಲದಲ್ಲಿ ಸಿಲುಕಿರುವ ಬೇರೆ ರಾಷ್ಟ್ರಗಳ ಪ್ರಜೆಗಳ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕದನ ವಿರಾಮವನ್ನು ಘೋಷಿಸಲಾಗಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕಾಗಿ ರಷ್ಯಾ ಕೊಂಚ ವಿರಾಮ ನೀಡಿದೆ. ಭಾರತೀಯ ಕಾಲಾವಧಿ ಪ್ರಕಾರ ಬೆಳಗ್ಗೆ 11.30ರಿಂದ ಕದನ ವಿರಾಮ ಘೋಷಿಸಲಾಗಿದೆ. ಇದನ್ನು ಉಕ್ರೇನ್ ಕಾಲಮಾನದಲ್ಲಿ ನೋಡುವುದಾದರೆ ಬೆಳಗ್ಗೆ 6 ಗಂಟೆ ಆಗಿರುತ್ತದೆ. ಮಾಸ್ಕೋ ಮಿಲಿಟರಿ ಆಕ್ರಮಣ ಹೆಚ್ಚಿಸಿದ್ದರಿಂದ 10ನೇ ದಿನ ನಾಗರಿಕರು ಯುದ್ಧ ವಲಯವನ್ನು ತೊರೆಯಲು ಅವಕಾಶ ಮಾಡಿಕೊಡಲಾಗಿದೆ. ಉಕ್ರೇನಿಯನ್ ನಗರಗಳಾದ ಮಾರಿಯುಪೋಲ್ ಮತ್ತು ವೊಲ್ನೋವಾಖಾದಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಲಾಗಿದೆ. ವ್ಲಾಡಿಮಿರ್ ಪುಟಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಗೆ ಉಕ್ರೇನ್ ನೆಲದಲ್ಲಿ ನರಕಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಕಳೆದ ಒಂದೇ ವಾರದಲ್ಲಿ ರಷ್ಯಾ ಪಡೆಯು 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.




