Thursday, July 10, 2025

Latest Posts

 ಭಯೋತ್ಪಾದನೆ ಸಹಿಸಲಾಗದು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ : ಮೋದಿಗೆ ಪುಟಿನ್‌ ಫುಲ್‌ ಸಪೋರ್ಟ್‌

- Advertisement -

ನವದೆಹಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಮಾರಣ ಹೋಮದಲ್ಲಿ ಬಲಿಯಾಗಿರುವ ಅಮಾಯಕ ಪ್ರವಾಸಿಗರ ಕುಟುಂಬಗಳಿಗೆ ನ್ಯಾಯ ದೊರಕಬೇಕು. ಅಲ್ಲದೆ ರಕ್ತ ಪಿಪಾಸುಗಳಿಗೆ ತಕ್ಕ ಶಾಸ್ತಿಯಾಗುವ ನಿಟ್ಟಿನಲ್ಲಿ ಪ್ರತೀಕಾರ ಪಡೆಯಬೇಕು ಎಂಬ ಕೂಗುಗಳು ಹೆಚ್ಚಾಗಿವೆ. ಇನ್ನೂ ಈ ದಾಳಿಯನ್ನು ಖಂಡಿಸಿ ವಿಶ್ವದ ಹಲವಾರು ದೇಶಗಳು ಹಾಗೂ ಜಗತ್ತಿನ ಬಲಿಷ್ಠ ರಾಷ್ಟ್ರಗಳ ದಿಗ್ಗಜರು ಭಾರತಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಇದೇ ಸಾಲಿಗೆ ಈಗ ರಷ್ಯಾ ಸೇರಿಕೊಂಡಿರುವುದು ಭಾರತಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಭಾರತಕ್ಕೆ ರಷ್ಯಾ ಫುಲ್‌ ಸಪೋರ್ಟ್‌..

ಇನ್ನೂ ಈ ಕುರಿತು ರಷ್ಯಾ ರಾಯಭಾರ ಕಚೇರಿಯ ಹೇಳಿಕೆ ಉಲ್ಲೇಖಿಸಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್‌ ಜೈಸ್ವಾಲ್‌, ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಭಯೋತ್ಪಾದನಾ ನಿರ್ಮೂಲನೆಗಾಗಿ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಅಲ್ಲದೆ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸುವುದಾಗಿ ಪುನರುಚ್ಚರಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದಲ್ಲಿ ಜೊತೆಯಾಗುವೆ, ಈ ಹೇಯ ಘಟನೆಗೆ ಕಾರಣರಾಗಿರುವ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಬೇಕು ಅಂತ ಪ್ರಧಾನಿ ಮೋದಿಯವರಿಗೆ ಪುಟಿನ್‌ ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯಾರೊಬ್ಬರನ್ನೂ ಬಿಡಬಾರದು..

ಪಹಲ್ಗಾಮ್‌ ದಾಳಿಯಲ್ಲಿ ಬಲಿಯಾದ ಅಮಾಯಕ ಜೀವಗಳಿಗೆ ಸಂತಾಪ ಸೂಚಿಸಿದ್ದಾರೆ. ಈ ಘೋರ ದಾಳಿಯ ಅಪರಾಧಿಗಳು ಮತ್ತು ಅವರ ಬೆಂಬಲಿಗರನ್ನು ಬಿಡಬಾರದು ಅವರನೆಲ್ಲ ಮಟ್ಟ ಹಾಕಬೇಕು ಎಂದು ಪುಟಿನ್ ಒತ್ತಿ ಹೇಳಿದ್ದಾರೆ. ಭಯೋತ್ಪಾದಕ ದಾಳಿಯನ್ನು ಅನಾಗರಿಕ ಎಂದು ಪುಟಿನ್ ಬಣ್ಣಿಸಿರುವುದನ್ನು ಉಲ್ಲೇಖಿಸಿದ ರಷ್ಯಾದ ರಾಯಭಾರ ಕಚೇರಿಯ ಹೇಳಿಕೆ ಎರಡೂ ಕಡೆಯವರು ಭಯೋತ್ಪಾದನೆಯ ವಿರುದ್ಧ ರಾಜಿಯಾಗದ ಹೋರಾಟದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ ಎಂದು ಹೇಳಿದ್ದಾರೆ.

ಭಾರತ – ರಷ್ಯಾ ಸಂಬಂಧ ವೃದ್ಧಿ..!

ಅಲ್ಲದೆ ಸಂಭಾಷಣೆಯ ಸಮಯದಲ್ಲಿ, ವಿಶೇಷ ಸವಲತ್ತು ಹೊಂದಿರುವ ಪಾಲುದಾರಿಕೆಯಾಗಿ ರಷ್ಯಾ-ಭಾರತೀಯ ಸಂಬಂಧಗಳ ಕಾರ್ಯತಂತ್ರದ ಸ್ವರೂಪವನ್ನು ಒತ್ತಿಹೇಳಲಾಯಿತು. ಈ ಸಂಬಂಧಗಳು ಬಾಹ್ಯ ಪ್ರಭಾವಕ್ಕೆ ಒಳಪಡುವುದಿಲ್ಲ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಕ್ರಿಯಾತ್ಮಕವಾಗಿ ಅಭಿವೃದ್ಧಿ ಹೊಂದುತ್ತಲೇ ಇರುತ್ತವೆ. ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದ್ದಾರೆ ಎಂದು ಜೈಸ್ವಾಲ್‌ ತಿಳಿಸಿದ್ದಾರೆ.

ಪುಟಿನ್‌ಗೆ ಭಾರತಕ್ಕೆ ಆಹ್ವಾನ..

ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ಸೋಲಿನ 80 ನೇ ವಾರ್ಷಿಕೋತ್ಸವದ ವಿಜಯೋತ್ಸವಕ್ಕೆ ಮೋದಿ ಪುಟಿನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯುವ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಗೆ ಪುಟಿನ್‌ ಅವರನ್ನು ಮೋದಿ ಭಾರತಕ್ಕೆ ಆಹ್ವಾನಿಸಿದ್ದಾರೆ ಎಂದು ರಣದೀಪ್‌ ಜೈಸ್ವಾಲ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ಎರಡು ದಿಗ್ಗಜ ನಾಯಕರ ನಡುವಿನ ಸಮಾಲೋಚನೆಯನ್ನು ವಿವರಿಸಿದ್ದಾರೆ.

ಪಹಲ್ಗಾಮ್‌ ದಾಳಿಯ ಕುರಿತು ಯಾವುದೇ ಸಮರ್ಥನೆಗೆ ಅವಕಾಶವಿಲ್ಲ..

ಇನ್ನೂ ಪಹಲ್ಗಾಮ್‌ ದಾಳಿಯ ಬೆನ್ನಲ್ಲಿಯೇ ತಮ್ಮ ಸಂದೇಶದಲ್ಲಿ ಪುಟಿನ್‌, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಔಪಚಾರಿಕವಾಗಿ ಸಂತಾಪ ಸೂಚಿಸಿದ್ದರು. ಈ ಕ್ರೂರ ಅಪರಾಧಕ್ಕೆ ಯಾವುದೇ ಸಮರ್ಥನೆಗೆ ಅವಕಾಶ ಇಲ್ಲ. ಇದರ ಹಿಂದೆ ಇರುವವರು ಮತ್ತು ಇದರಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆ ಸಮಯದಲ್ಲಿ, ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತೀಯ ಪಾಲುದಾರರೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಿದ್ಧತೆಯನ್ನು ಪುಟಿನ್ ತಿಳಿಸಿದ್ದರು.

ಇನ್ನೂ ಪ್ರಮುಖವಾಗಿ ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಈ ಮಾತು ಭಾರತಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ತಮ್ಮ ರಷ್ಯಾ ಪ್ರವಾಸವನ್ನು ರದ್ದುಗೊಳಿಸಿದ್ದರು. ಇದಾದ ಬಳಿಕ ಖುದ್ದು ಪುಟಿನ್‌ ಕರೆ ಮಾಡಿರುವುದು ಸಂಚಲನಕ್ಕೆ ಕಾರಣವಾಗಿದೆ. ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಉಲ್ಬಣವಾಗಿರುವ ಉದ್ವಿಗ್ನತೆಯನ್ನು ಗಮನಿಸಿ ಅವರು ತಮ್ಮ ಪ್ರವಾಸ ರದ್ದುಗೊಳಿಸಿದ್ದರು. ಹೀಗಾಗಿ ಭಾರತ ಹಾಗೂ ಪಾಕ್‌ ಮಧ್ಯೆ ಮುಂದುವರೆದಿರುವ ಸಂಘರ್ಷವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಪುಟಿನ್‌ ಇದೀಗ ಭಾರತದ ಪರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಏನೆಂದು ಸಾಬೀತಾಗುತ್ತಿದೆ.

- Advertisement -

Latest Posts

Don't Miss