Saturday, July 27, 2024

Latest Posts

Madhu Bangarappa: ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳೆ ಹೊಣೆ :

- Advertisement -

ಬೆಂಗಳೂರು : ರಾಜ್ಯದಾದ್ಯಂತ ಒಟ್ಟು 1,695 ಅನಧಿಕೃತ ಶಾಲೆಗಳಿವೆ. ಈ ಶಾಲೆಗಳಿಗೆ ತಮ್ಮ ಲೋಪವನ್ನು ಸರಿಪಡಿಸಲು ಸಮಯವ ನೀಡಬೇಕಿದೆ, ಸಮಯ ಅವಕಾಶ ನೀಡಿ ಹಂತ ಹಂತವಾಗಿ ಈ ಶಾಲೆಗಳನ್ನು ಮುಚ್ಚುತ್ತೇವೆ. ಶಾಲೆಗಳನ್ನು ಮುಚ್ಚಿಸುವುದು ದೊಡ್ಡ ವಿಷಯವಲ್ಲ, ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಜರುಗಿಸುವುದಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ತಿಳಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಚಿವರು ಮಾಹಿತಿ ನೀಡಿದರು.

ರಾಜ್ಯಾದ್ಯಂತ 26 ಶಾಲೆಗಳು ನೋಂದಣಿಯನ್ನೇ ಮಾಡಿಲ್ಲ, ಅನುಮತಿ ಪಡೆಯದೆ ಉನ್ನತೀಕರಿಸಿರುವ ಶಾಲೆಗಳು 76, ಇತರೆ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು 143, ಅನುಮತಿ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ಪಡೆದಿರುವ 631, ಅನುಮತಿ ಪಡೆಯದೆ ಸ್ಥಳಾಂತರಿಸಿರುವ 190, ಅನುಮತಿ ಪಡೆಯದೆ ಹಸ್ತಾಂತರ ಮಾಡಿರುವ 15, ಒಂದೇ ಕಟ್ಟಡದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು-495 ಶಾಲೆಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.

ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುವಂತೆ ಆಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಶಾಲಾ ವಿದ್ಯುತ್, ನೀರು ಬಿಲ್ ಮನ್ನಾ ಚಿಂತನೆ : ಸರ್ಕಾರಿ ಶಾಲೆಗಳ ನೀರು ಮತ್ತು ವಿದ್ಯುತ್ ಬಿಲ್ ಮೊತ್ತವನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಅತಿ ಕಡಿಮೆ ಮೊತ್ತದ ಬಿಲ್ ಗಳಿರುವುದರಿಂದ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಸಚಿವರು ತಿಳಿಸಿದರು.

ಆ. 18ರಂದು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 2 ದಿನ ನೀಡುತ್ತಿರುವ ಮೊಟ್ಟೆ ವಿತರಣೆ ಯೋಜನೆಯನ್ನು ಶಾಲೆಯೊಂದರಲ್ಲಿ ಮೊಟ್ಟೆ/ಬಾಳೇಹಣ್ಣು/ಶೇಂಗಾ ಚಿಕ್ಕಿ ವಿತರಿಸುವ ಮೂಲಕ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಬಜೆಟ್ನಲ್ಲಿ ಘೋಷಿಸಿದ್ದಂತೆ ಶಾಲಾ ಆವರಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ 50 ಲಕ್ಷ ಗಿಡಗಳನ್ನು ನೆಡುವ ‘ಸಸ್ಯ ಶ್ಯಾಮಲಾ’ ಯೋಜನೆ ಅನುಷ್ಠಾನಕ್ಕೆ ಚರ್ಚಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಖಾಸಗಿ ಶಾಲೆಗಳು ಪ್ರತಿವರ್ಷ ಆಗ್ನಿ ಶಾಮಕ ದಳದಿಂದ ಅನುಮತಿ ನವೀಕರಣ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಸಡಿಲಿಸಲು ಸಾಧ್ಯವಿಲ್ಲ. ನಮಗೆ ಮಕ್ಕಳ ಸುರಕ್ಷತೆ ಮುಖ್ಯ. ಅದೇ ರೀತಿ ಶಾಲಾ ಮಕ್ಕಳನ್ನು ಮ್ಯಾನೇಜ್ಮೆಂಟ್ನ ಸೇವೆಗಳಿಗೆ ಬಳಸಿದರೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಗಿಡ ನೆಡುವುದು ಮುಂತಾದ ಕಲಿಕೆಯ ಉದ್ದೇಶದ ಕೆಲಸಗಳಿಗೆ ವಿನಾಯಿತಿಯಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಈ ವೇಳೆ ಶಾಲಾ ಶಿಕ್ಷಣ ಆಯುಕ್ತೆ ಬಿ.ಬಿ. ಕಾವೇರಿ ಉಪಸ್ಥಿತರಿದ್ದರು.

Police: ಯುವತಿಯ ವಿಚಾರವಾಗಿ ಮೂವರಿಗೆ ಚಾಕು ಇರಿತ

DK Shivakmar: ಅಥಣಿಯ ಪಶು ವೈದ್ಯಕೀಯ ವಿದ್ಯಾಲಯ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ

Laxman savadi: ಅಥಣಿ ಮತ ಕ್ಷೇತ್ರದ ಜನರ ಋಣವನ್ನು ತೀರಿಸಲು ಅವಕಾಶ ನೀಡಬೇಕು

- Advertisement -

Latest Posts

Don't Miss