Thursday, April 3, 2025

Latest Posts

Sandalwood News: ಜನ ಮೆಚ್ಚಿದ ದಚ್ಚು! ಹಿರಿಯ ನಟಿಗೆ ದರ್ಶನ್ ಬೆಳಕು

- Advertisement -

Sandalwood News: ಬಲಗೈ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನೋದು ನಟ ದರ್ಶನ್ ಅವರ ಪಾಲಿಸಿ. ಅವರಷ್ಟೇ ಅಲ್ಲ, ನಟ ಪುನೀತ್ ರಾಜಕುಮಾರ್ ಅವರ ಪಾಲಿಸಿಯೂ ಇದೇ ಆಗಿತ್ತು. ಅದೆಷ್ಟೋ ಅಸಹಾಯಕ ಕಲಾವಿದರಿಗೆ, ಬಡವರಿಗೆ, ನೊಂದವರಿಗೆ ಕನ್ನಡದ ಅನೇಕ ಸ್ಟಾರ್ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಹಾಗೆ ನೋಡಿದರೆ, ದರ್ಶನ್ ಮತ್ತು ಪುನೀತ್ ಇಬ್ಬರೂ ಮಾಡಿರುವ ಇಂತಹ ಮಾನವೀಯ ಕೆಲಸಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಆ ವಿಚಾರದಲ್ಲಿ ನಿಜವಾಗಿಯೂ ಇವರನ್ನು ಮೆಚ್ಚಿಕೊಳ್ಳಲೇಬೇಕು.

ಕನ್ನಡ ಚಿತ್ರರಂಗದಲ್ಲಿ ಕರ್ಣ ಅಂತಂದರೆ ಅದು ಅಂಬರೀಶ್. ಅವರು ಮಾಡಿದ ಮಾನವೀಯ ಕೆಲಸಗಳಿಗೆ ಲೆಕ್ಕವೇ ಇಲ್ಲ. ಅವರ ಹುಡುಕಿ ಬಂದು ಕೈ ಚಾಚಿದವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸಿದ ಉದಾಹರಣೆಯೇ ಇಲ್ಲ. ಅಂಬರೀಶ್ ಅವರದ್ದು ಆ ವಿಚಾರದಲ್ಲಿ ದೊಡ್ಡ ಗುಣ. ಅದೆಷ್ಟೋ ಜನ ಅವರನ್ನು ಈಗಲೂ ಕೊಂಡಾಡುತ್ತಾರೆ. ಹಾಗೆಯೇ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಪುನೀತ್, ದರ್ಶನ್, ಸುದೀಪ್, ಯಶ್ ಸೇರಿದಂತೆ ಹಲವು ನಟರು ಕೂಡ ತಮ್ಮ ಕೈಲಾದಷ್ಟು ಒಂದಷ್ಟು ಮಂದಿಗೆ ಸಹಾಯ ಹಸ್ತ ಚಾಚಿರುವುದುಂಟು. ಆ ವಿಚಾರದಲ್ಲಿ ದರ್ಶನ್ ಒಂದು ಹೆಜ್ಜೆ ಮುಂದೆ ಅಂತಾನೇ ಹೇಳಬಹುದು. ಅವರು ಮಾಡಿರುವ ಅದೆಷ್ಟೋ ಒಳ್ಳೆಯ ಕೆಲಸಗಳು ಬೆಳಕಿಗೆ ಬಂದಿಲ್ಲ. ಬೆಳಕಿಗೆ ಬರುವುದಕ್ಕೂ ಅವರು ಬಿಡಲ್ಲ. ಕಷ್ಟ ಅಂತ ಹೇಳಿಕೊಂಡವರಿಗೆ ಸಹಾಯ ಮಾಡುವುದರಲ್ಲಿ ದರ್ಶನ್ ಹಿಂದೆ ಉಳಿದಿಲ್ಲ. ಆದರೆ, ಅವರ ಕಂಡೀಷನ್ ಮಾತ್ರ ಖಡಕ್ ಆಗಿರುತ್ತೆ. ಯಾವುದೇ ಕಾರಣಕ್ಕೂ ಸಹಾಯ ಪಡೆದವರು ದರ್ಶನ್ ಅವರ ಹೆಸರು ಹೇಳುವಂತಿಲ್ಲ. ಎಲ್ಲೋ ಒಮ್ಮೊಮ್ಮೆ ದರ್ಶನ್ ಮೇಲಿನ ಅತಿಯಾದ ಪ್ರೀತಿ ಅವರ ಸಹಾಯದ ಬಗ್ಗೆ ಹೇಳಬೇಕು ಅನಿಸಿಬಿಡುತ್ತೆ. ಹಾಗಾಗಿ ದರ್ಶನ್ ಮಾಡಿದ ಒಂದಷ್ಟು ಒಳ್ಳೆಯ ಕೆಲಸಗಳು ಆಗಾಗ ಬಯಲಾಗುತ್ತಿರುತ್ತವೆ.

ಇತ್ತೀಚೆಗಷ್ಟೇ ಸುದೀಪ್ ಮತ್ತು ಧ್ರುವ ಸರ್ಜಾ ಇಬ್ಬರೂ ಕಂದಮ್ಮಗಳ ಕಷ್ಟಕ್ಕೆ ಮಿಡಿದಿದ್ದು, ಎಲ್ಲರಿಗೂ ಗೊತ್ತೇ ಇದೆ. ಅದೊಂದು ಕರ್ತವ್ಯ ಅಂದುಕೊಂಡು ಮಾಡಿದ ಕೆಲಸವಷ್ಟೇ. ಹಾಗೆಯೇ ದರ್ಶನ್ ಕೂಡ ಹಿರಿಯ ಕಲಾವಿದೆಯೊಬ್ಬರ ಜೀವನಕ್ಕೆ ಬೆಳಕಾಗಿದ್ದರ ವಿಷಯವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಆ ವಿಷಯಕ್ಕೆ ಸಾಕಷ್ಟು ಮೆಚ್ಚುಗೆಗಳು ಬರುತ್ತಲೇ ಇವೆ.

ಇಷ್ಟಕ್ಕೂ ದರ್ಶನ್ ಮಾಡಿದ ಕೆಲಸವೇನು? ಆ ಹಿರಿಯ ಕಲಾವಿದೆ ಯಾರು? ಅವರಿಗಾದ ಸಮಸ್ಯೆ ಏನು? ಬಗೆಹರಿಸಿದ ಕೆಲಸವೇನು? ಈ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಏನದು? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

ಕನ್ನಡದ ಹಿರಿಯ ನಟಿ ಶೈಲಶ್ರೀ ಅವರಿಗೆ ದರ್ಶನ್ ಸಹಾಯ ಮಾಡುತ್ತಿದ್ದಾರೆ ಎಂಬುದು ಸದ್ಯ ಗೊತ್ತಾಗಿದೆ. ಆ ಕಲಾವಿದೆ ಅವರು ಮನೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಸುದ್ದಿ ದರ್ಶನ್ ಅವರಿಗೆ ಗೊತ್ತಾಗಿ, ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ. ದರ್ಶನ್ ಅವರ ಈ ಕೆಲಸಕ್ಕೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇಲ್ಲಿ ಒಂದು ಅಂಶ ಗಮನಿಸಲೇಬೇಕು ದರ್ಶನ್ ಎಂದಿಗೂ ಇಂತಹ ಒಳ್ಳೆಯ ಕೆಲಸಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅದು ಅವರಿಗೆ ಇಷ್ಟವೂ ಇಲ್ಲ.

ದರ್ಶನ್ ಇತ್ತೀಚೆಗೆ ಪ್ರಕರಣವೊಂದರಿಂದ ಸುದ್ದಿಯಾಗಿದ್ದರು. ಒಳಿತು-ಕೆಡುಕಿನ ಮಾತುಗಳು ಕೇಳಿಬಂದಿದ್ದವು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಜಾಮೀನು ಪಡೆದು ಸದ್ಯ ಹೊರಬಂದಿರುವ ದರ್ಶನ್, ಒಂದೊಳ್ಳೆಯ ಕೆಲಸ ಮಾಡಿರುವ ಸುದ್ದಿಯೊಂದು ಹರಿದಾಡುತ್ತಿದೆ. ಗಣೇಶ್ ಕಾಸರಗೋಡು ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರೇ ವಿವರಿಸಿದಂತೆ…

ಕನ್ನಡದ ಹಿರಿಯ ನಟ ಆರ್.ಎನ್.​ ಸುದರ್ಶನ್ ಅವರು 2017ರಲ್ಲಿ ನಿಧನರಾರು. ಅವರ ತಂದೆ ನಾಗೇಂದ್ರ ರಾವ್ ಕೂಡ ಸಿನಿಮಾ ಕೃಷಿ ಮಾಡಿಕೊಂಡಿದ್ದವರು. ಅವರು ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಸುದರ್ಶನ್ ಪತ್ನಿ ಶೈಲಶ್ರೀ ಕೂಡ ಕಲಾವಿದೆ. ಕನ್ನಡ ಚಿತ್ರರಂಗಕ್ಕೆ ನಾಗೇಂದ್ರ ರಾವ್ ಕುಟುಂಬ ನೀಡಿದ ಕೊಡುಗೆ ಅಪಾರ. ಸುದರ್ಶನ್ ಮರಣದ ಬಳಿಕ ಅವರ ಪತ್ನಿ ಶೈಲಶ್ರೀ ಒಬ್ಬಂಟಿ.

ಈ ಮೊದಲು ಅಪಾರ್ಟ್​ಮೆಂಟ್ ಒಂದರಲ್ಲಿ ಶೈಲಶ್ರೀ ಅವರು ವಾಸ ಮಾಡುತ್ತಿದ್ದರು. ಆದರೆ, ಅದರ ಮಾಲೀಕರು ಬಿಲ್ಡಿಂಗ್ ನೆಲಸಮ ಮಾಡಿದ್ದರಿಂದ, ಶೈಲಶ್ರೀ ಅವರು ಬೇರೆ ನೆಲೆ ಕಂಡುಕೊಳ್ಳಬೇಕಿತ್ತು. ಆಗ ಹಿರಿಯ ನಟಿಯೊಬ್ಬರು ಶೈಲಶ್ರೀ ಸಹಾಯಕ್ಕೆ ಬಂದರು. ಅವರ ಸಲಹೆಯಂತೆ ಆಶ್ರಮ ಸೇರಿದರು. ಆರಂಭದಲ್ಲಿ ಖರ್ಚು ವೆಚ್ಛಗಳನ್ನು ಹಿರಿಯ ನಟಿ ನೋಡಿಕೊಳ್ಳುತ್ತಿದ್ದರು. ಆದರೆ, ತಿಂಗಳುಗಳು ಉರುಳಿದಂತೆ ಇದು ಸಾಧ್ಯವಾಗಿಲ್ಲ.

ಆಗ ಸಹಾಯಕ್ಕೆ ಬಂದಿದ್ದೇ ನಟ ದರ್ಶನ್. ಶೈಲಿಶ್ರೀ ಅವರ ಕೊನೆಗಾಲದವರೆಗೂ ಸಹಾಯ ಮಾಡಲು ದರ್ಶನ್ ಒಪ್ಪಿ ಮುಂದೆ ಬಂದಿದ್ದಾರೆ. ಬಲಗೈ ಕೊಟ್ಟಿದ್ದು, ಎಡಗೈ ಗೊತ್ತಾಗಬಾರದು ಎಂಬುದು ದರ್ಶನ್ ಅವರ ಪಾಲಿಸಿ. ಹೀಗಾಗಿ, ಇದನ್ನು ಅವರು ಎಲ್ಲೂ ಹೇಳಿಕೊಂಡಿಲ್ಲ. ಹೇಳಿಕೊಳ್ಳುವುದೂ ಇಲ್ಲ. ಈಗ ದರ್ಶನ್ ಮಾಡಿರುವ ಸಹಾಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಾ ಇದೆ.

ದರ್ಶನ್, ಸುದೀಪ್, ಯಶ್ ಸೇರಿದಂತೆ ಹಿರಿಯ ಕಲಾವಿದರು ಅವರು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದರು ಕಷ್ಟದಲ್ಲಿ ಇರುವಾಗ ಅವರ ಕಷ್ಟಕ್ಕೆ ಧ್ವನಿ ಆಗಿದ್ದಾರೆ. ಆದರೆ, ಅದನ್ನು ಹೊರಗೆ ಹೇಳಿಕೊಂಡು ಓಡಾಡಲು ಅವರಿಗೆ ಇಷ್ಟ ಇಲ್ಲ. ಆದಾಗ್ಯೂ ಅಲ್ಲೊಂದು-ಇಲ್ಲೊಂದು ಸುದ್ದಿಗಳು ಈ ರೀತಿ ಹೊರ ಬಂದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತದೆ.

- Advertisement -

Latest Posts

Don't Miss