Sunday, February 9, 2025

Latest Posts

Sandalwood News: ಹಾಸ್ಯ ನಟ ಸರಿಗಮ ವಿಜಿ ಇನ್ನಿಲ್ಲ

- Advertisement -

Sandalwood News: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ನಟ, ರಂಗಕರ್ಮಿ ಸರಿಗಮ ವಿಜಿ (76) ನಿಧನರಾಗಿದ್ದಾರೆ. ವಾರದ ಹಿಂದೆಯಷ್ಟೆ ಅವರನ್ನು ಯಶವಂತಪುರ ಬಳಿಯ ಮಣಿಪಾಲ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ವಿಜಿ ಬಳಲುತ್ತಿದ್ದರು. ಚಿಕಿತ್ಸೆ ಫಲ ನೀಡದೆ ಅವರು ಯಶವಂತಪುರದ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರುವ ಎಳೆದಿದ್ದಾರೆ.

ಅವರ ಪೂರ್ಣ ಹೆಸರು ವಿಜಯ್ ಕುಮಾರ್. ನಗರದ ಹೆಚ್‌ಎಎಲ್‌ ಬಳಿಯ ವಿಮಾನಪುರದಲ್ಲಿ ಅವರ ಜನನವಾಗಿತ್ತು. ಮೂಲತಃ ರಂಗಭೂಮಿ ಕಲಾವಿದರಾಗಿದ್ದ ವಿಜಿ ನಂತರದ ದಿನಗಳಲ್ಲಿ ಬೆಳ್ಳಿತೆರೆಗು ಕಾಲಿಟ್ಟು ಅಲ್ಲೂ ಜನಪ್ರಿಯತೆ ಪಡೆದು. ‘ಡಕೋಟಾ ಎಕ್ಸ್‌ಪ್ರೆಸ್’ ಅವರು ನಟಿಸಿದ ಕೊನೆಯ ಸಿನಿಮಾ. 269 ಸಿನಿಮಾಗಳಲ್ಲಿ ಸರಿಗಮ ವಿಜಿ ನಟಿಸಿದ್ದರು. ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದರು. 80ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು. ಅವರು ನಟರಷ್ಟೇ ಅಲ್ಲ, ಬರಹಗಾರರಾಗಿಯೂ ಗುರುತಿಸಿಕೊಂಡಿದ್ದರು. ಟೈಗರ್ ಪ್ರಭಾಕರ್ ಹಾಗೂ ವಿಜಿ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಪ್ರಭಾಕರ್ ಆಪ್ತ ಬಳಗದಲ್ಲಿನ ಕೂಡ ಅವರು ಗುರುತಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರ ಉಳಿದಿದ್ದರು.

1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಚಿತ್ರದಲ್ಲಿ ಸರಿಗಮ ವಿಜಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಸರಿಗಮನ ವಿಜಿ ಕಾಣಿಸಿಕೊಂಡಿದ್ದರು. ಹಲವು ನಾಟಕಗಳಲ್ಲಿ ನಟಿಸಿ ಮನೆಮಾತಾಗಿದ್ದರು. ಹಾಗಾಗಿ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕಿತ್ತು. ಹಾಸ್ಯಪಾತ್ರಗಳಲ್ಲೇ ಹೆಚ್ಚು ವಿಜಿ ನಟಿಸಿದ್ದರು. ನಾಟಕಗಳಲ್ಲಿ ಕೂಡ ಅಂತಹ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ವಿಜಿ ಅವರು ನಟಿಸುತ್ತಿದ್ದ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಜನಪ್ರಿಯವಾಗಿತ್ತು. 1397 ಪ್ರದರ್ಶನ ಕಾಣುವ ಮೂಲಕ ಈ ನಾಟಕ ರೆಕಾರ್ಡ್ ಬರೆದಿತ್ತು. ಹಾಗಾಗಿ ಅವರ ಹೆಸರಿನ ಜೊತೆ ಸರಿಗಮ ಎನ್ನುವುದು ಸೇರಿಕೊಂಡಿತ್ತು.

ಸರಿಗಮ ವಿಜಿ ಅವರ ತಂದೆ ರಾಮಯ್ಯ ಹೆಚ್‌ಎಎಲ್‌ ಉದ್ಯೋಗಿ ಆಗಿದ್ದರು. ಒಟ್ಟು ಐವರು ಮಕ್ಕಳಲ್ಲಿ ವಿಜಯ್‌ ಕುಮಾರ್ ಕೊನೆಯವರು. ವಿಜಿ ಸರ್ಕಾರಿ ಶಾಲೆಯಲ್ಲಿ ಓದಿದ್ದರು. ಫ್ಯಾನ್ಸಿ ಡ್ರೆಸ್‌ ಕಾಂಪಿಟೇಷನ್‌ನಲ್ಲಿ ಘಟೋತ್ಕಚನ ವೇಷ ಹಾಕಿ ಮೊದಲ ಬಾರಿ ಚಪ್ಪಾಳೆ ಗಿಟ್ಟಿಸಿದ್ದರು. ಶಾಲಾ ಕಾರ್ಯಕ್ರಮಗಳಲ್ಲಿ ಇದೇ ರೀತಿ ವೇಷ ಹಾಕಿ ರಂಜಿಸುತ್ತಿದ್ದರು. ಜನರಿಂದ ಸಿಕ್ಕ ಪ್ರೋತ್ಸಾಹವೇ ನಟನೆಯತ್ತ ಮುಖ ಮಾಡುವಂತೆ ಮಾಡಿತ್ತು. ತಂದೆಯ ಪ್ರೋತ್ಸಾಹ ಸಿಕ್ಕಿ ಶಾಲಾ ದಿನಗಳಲ್ಲಿ ತಾವೇ ನಾಟಕ ಬರೆದು ನಟಿಸುತ್ತಿದ್ದರು. ಮುಂದೆ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಮಿಂಚಿದರು.

ಹೈಸ್ಕೂಲ್‌ನಲ್ಲಿ ನಟ ಅರ್ಜುನ್ ಸರ್ಜಾ ಅವರ ತಂದೆ ಶಕ್ತಿಪ್ರಸಾದ್ ಪೀಟಿ ಮಾಸ್ಟರ್ ಆಗಿದ್ದರು. ಅವರ ಸಹಕಾರದಿಂದ ಮತ್ತಷ್ಟು ನಾಟಕಗಳಲ್ಲಿ ಅವರು ನಟಿಸಿದರು. ಗ್ಯಾಸ್(GAS) ಕಾಲೇಜಿನಲ್ಲಿ ಪಿಯುಸಿ ಓದುವಾಗ ನಟ ಅಶೋಕ್‌ ಜೊತೆ ಸೇರಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಕಾಲೇಜು ದಿನಗಳಲ್ಲಿ ಕೂಡ ನಾಟಕಗಳಲ್ಲಿ ನಟಿಸಿ ಹೆಸರು ಮಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ 2 ಬಾರಿ ಫೇಲ್ ಆಗಿದ್ದರು. ಹೇಗೋ ಪದವಿ ಮುಗಿಸಿದರು. ಕೆಲಸ ಇಲ್ಲದೆ ಖಾಲಿ ಕುಳಿತಾಗ ‘ಬೆಳವಳದ ಮಡಿಲಲ್ಲಿ’ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆ ಚಿತ್ರಕ್ಕೆ ಸಹನಿರ್ದೇಶಕರಾಗಿ ಕೆಲಸ ಮಾಡಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು.

ಸಿನಿಮಾ ನಂಬಿಕೊಂಡರೆ ಆಗಲ್ಲ ಎಂದು ಎನ್‌ಜಿಎಫ್‌ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ರಜೆ ಸಿಗದೇ ಚಿತ್ರರಂಗ ಮರೆತು 3 ವರ್ಷ ಕೆಲಸ ಮಾಡಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗಲೇ ‘ಸಂಸಾರದಲ್ಲಿ ಸರಿಗಮ’ ನಾಟಕ ಬರೆದು ನಟಿಸಿ ಗೆದ್ದರು. ಮುಂದೆ ಆ ನಾಟಕ ಬಹಳ ಜನಪ್ರಿಯವಾಗಿಯ್ತು. ಬಳಿಕ ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೂ ಚಿತ್ರರಂಗ ಬಿಟ್ಟು ಕಾರ್ಖಾನೆ ಸೇರಿದ್ದರು.

ಕೊನೆಗೆ ಕೆಲಸ ಹೋದರೂ ಪರವಾಗಿಲ್ಲ ಎಂದು ಖ್ಯಾತ ನಿರ್ದೇಶಕ ಸೋಮಶೇಖರ್ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಮುಂದೆ ದೊಡ್ಡ ದೊಡ್ಡ ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದರು. ಕಾರ್ಖಾನೆ ಕೆಲಸದ ಜೊತೆ ಜೊತೆಗೆ ಚಿತ್ರರಂಗದಲ್ಲಿ ಮುಂದುವರೆದರು. ಬಳಿಕ ನಟಿ ಜಯಂತಿ ಅವರು ನಿರ್ದೇಶಿಸಿದ ‘ವಿಜಯ್’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಮುಂದೆ ಜಯಂತಿ ಅವರ ‘ಏನ್ ಸ್ವಾಮಿ ಅಳಿಯಂದ್ರೆ’ ಚಿತ್ರಕ್ಕೂ ವಿಜಿ ಸಹಾಯಕರಾಗಿದ್ದರು. ಆ ಚಿತ್ರದಲ್ಲಿ ಅವರ ಕೆಲಸ ನೋಡಿ ಟೈಗರ್ ಪ್ರಭಾಕರ್ ಮೆಚ್ಚಿದರು. ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರು. ಪ್ರಭಾಕರ್ ಅವರೊಂದಿಗೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಮುಂದೆ ಏಳೆಂಟು ಸಿನಿಮಾಗಳಲ್ಲಿ ಪ್ರಭಾಕರ್ ಜೊತೆ ಸಹಾಯಕರಾಗಿ ದುಡಿದು ಹಾಸ್ಯ ಪಾತ್ರಗಳಲ್ಲಿ ಸರಿಗಮ ವಿಜಿ ಕಾಣಿಸಿಕೊಂಡಿದ್ದರು.

ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ತೆರೆಹಿಂದೆ ಸರಿದ ಸರಿಗಮ ವಿಜಿ ಸದಾ ತೆರೆಮೇಲೆ ಕಾಣಿಸುವ ಮೂಲಕ ಜೀವಂತ ಇದ್ದಾರೆ. ಅವರ ಮಹಾಲಕ್ಷ್ಮೀ ಲೇ ಔಟ್ ಮನೆಯಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅವರ ಸಮಕಾಲೀನ ಕಲಾವಿದರಾದ ಉಮಾಶ್ರೀ, ದೊಡ್ಡಣ್ಣ, ಡಿಂಗ್ರಿನಾಗರಾಜ್, ಬ್ಯಾಂಕ್ ಜನಾರ್ದನ್, ಶ್ರೀದೇವಿ ಇತರರು ಸಂತಾಪ ಸೂಚಿಸಿದ್ದಾರೆ.

- Advertisement -

Latest Posts

Don't Miss