Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ಆರೋಪಿಯಾಗಿರುವ ನಟ ದರ್ಶನ್, ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4 ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಸೋಮವಾರ (ಇಂದು) ಬೆಂಗಳೂರು ನಗರದ 57ನೇ ಸೆಷನ್ ಕೋರ್ಟ್‌ನಲ್ಲಿ ನಡೆಯಿತು. ಕಳೆದ ಶುಕ್ರವಾರ ಪವಿತ್ರಾ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಅಂದು ಅರ್ಜಿ ವಿಚಾರಣೆಯಲ್ಲಿ ಸೋಮವಾರ (ಸೆ.30) ಕ್ಕೆ ಮುಂದೂಡಲಾಗಿತ್ತು. ಈಗ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನೂ ಸಹ ಮುಂದೂಡಲಾಗಿದೆ. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ಅವರು ವಾದ ಮಂಡನೆಗೆ ಸಮಯವನ್ನು ಕೇಳಿದ್ದಾರೆ.
ಜೂನ್ 11 ರಂದು ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರು ಅಲ್ಲಿದ್ದ ಕೆಲ ಅಪರಾಧಿಗಳ ಜೊತೆ ಕುರ್ಚಿ ಮೇಲೆ ಕುಳಿತು, ಟೀ ಕಪ್ ಹಿಡಿದು ಕೈಯಲ್ಲೊಂದು ಸಿಗರೇಟ್ ಹಿಡಿದಿದ್ದ ಫೋಟೋವೊಂದು ವೈರಲ್ ಆಗಿತ್ತು. ಅದು ಚರ್ಚೆಗೆ ಗ್ರಾಸವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿ ಸೇರಿದಂತೆ ಕೆಲ ಸಿಬ್ಬಂಧಿಯನ್ನು ಸಸ್ಪೆಂಡ್ ಮಾಡಲಾಗಿತ್ತು. ನಂತರ ಆ ಜೈಲಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ದರ್ಶನ್ ಮತ್ತು ಪವಿತ್ರಾಗೌಡ ಇಬ್ಬರೂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆಯನ್ನ ನ್ಯಾಯಾಲಯ ಮುಂದಕ್ಕೆ ಹಾಕುತ್ತಲೇ ಬಂದಿದೆ. ಈ ಮಧ್ಯೆ, ಮೂವರು ಆರೋಪಿಗಳಿಗೆ ಜಾಮೀನು ಕೂಡ ಸಿಕ್ಕಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿಗ ಕಾರ್ತಿಕ್, ನಿಖಲ್ ಮತ್ತು ಕೇಶವಮೂರ್ತಿ ಅವರಿಗೆ ಜಾಮೀನು ದೊರೆತಿತ್ತು.