Sandalwood News: ಅದೇನೇ ಇರಲಿ, ಕೆಲವು ನಟಿಯರಿಗೆ ಅದೃಷ್ಟ ಮೇಲಿಂದ ಮೇಲೆ ಹುಡುಕಿ ಬರುತ್ತಲೇ ಇರುತ್ತೆ. ಮತ್ತೆ ಇದೀಗ ಅಂಥದ್ದೊಂದು ಅವಕಾಶ ಹುಡುಕಿ ಬಂದಿರೋದು ರಶ್ಮಿಕಾ ಮಂದಣ್ಣ ಅವರಿಗೆ ಅಂದರೆ ನಂಬಲೇಬೇಕು. ಕನ್ನಡದ ಹುಡುಗಿಯಾಗಿದ್ದರೂ, ರಶ್ಮಿಕಾ ಅದೇಕೋ ಏನೋ, ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದುಂಟು. ಅಷ್ಟಾದರೂ, ಈಕೆಯನ್ನು ಹುಡುಕಿಕೊಂಡು ಸ್ಟಾರ್ ನಟರ ಸಿನಿಮಾಗಳೇ ಬರುತ್ತಿವೆ ಅನ್ನೋದೇ ವಿಶೇಷ.
ಹೌದು, ರಶ್ಮಿಕಾ ಮಂದಣ್ಣ ಹೇಳಿಕೇಳಿ ಅದೃಷ್ಟದ ಹುಡುಗಿ. ಕಾರಣ, ತಮ್ಮ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಜೋರು ಸುದ್ದಿಯಾದವರು. ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡದ ಈಕೆ, ಕನ್ನಡದ ಬಹುತೇಕ ಸ್ಟಾರ್ ಗಳ ಜೊತೆ ನಟಿಸಿ ಸೈ ಎನಿಸಿಕೊಂಡರು. ನೋಡ ನೋಡುತ್ತಿದ್ದಂತೆಯೇ ರಶ್ಮಿಕಾ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟು ಅಲ್ಲೂ ಮೋಡಿ ಮಾಡಿಬಿಟ್ಟರು. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಅಲ್ಲಿಂದ ಹಾರಿ ಧುಮುಕಿದ್ದು ಬಾಲಿವುಡ್ ಅಂಗಳಕ್ಕೆ. ಅಲ್ಲೂ ಸ್ಟಾರ್ ನಟರ ಸಿನಿಮಾಗಳಿಗೆ ರಶ್ಮಿಕಾ ನಾಯಕಿ. ಸೋ, ರಶ್ಮಿಕಾ ಸದ್ಯ ಬಹು ಬೇಡಿಕೆಯ ನಟಿ ಅನ್ನೋದಂತೂ ಸತ್ಯ. ಅದರಲ್ಲೂ ಭಾರತೀಯ ಚಿತ್ರರಂಗದಲ್ಲೇ ಈಕೆಗೆ ಹೆಚ್ಚು ಬೇಡಿಕೆ ಇದೆ ಅನ್ನೋದನ್ನು ಒಪ್ಪಲೇಬೇಕು.
ಈಗಾಗಲೇ ರಶ್ಮಿಕಾ ಅಭಿನಯದ ಮೂರು ಚಿತ್ರಗಳು ಇತ್ತೀಚೆಗೆ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ‘ಅನಿಮಲ್’, ‘ಪುಷ್ಪ 2’ ‘ಛಾವಾ’ ಈ ಮೂರು ಸಿನಿಮಾಗಳಿಗೆ ಪ್ರೇಕ್ಷಕ ಜೈ ಅಂದ. ಅಲ್ಲಿಂದ ರಶ್ಮಿಕಾ ಬೇಡಿಕೆ ಇನ್ನಷ್ಟು ದುಪ್ಪಟ್ಟಾಯ್ತು. ಈಗ ರಶ್ಮಿಕಾ ಮತ್ತೊಮ್ಮೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್ ಅವರ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, ಅದೊಂದು ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾ. ಹಾಗಾಗಿ ಆ ಚಿತ್ರದ ಹೀರೋ ಕೂಡ ಪ್ಯಾನ್ ಇಂಡಿಯಾ ಸ್ಟಾರ್.
ರಶ್ಮಿಕಾ ಮಂದಣ್ಣ ಅಭಿನಯದ ‘ಅನಿಮಲ್’, ‘ಪುಷ್ಪ 2’ ಈಗ ‘ಛಾವಾ’ ಸಿನಿಮಾಗಳು ಯಾವಾಗ ಬಾಕ್ಸಾಫೀಸ್ ಸೌಂಡ್ ಮಾಡಿದ್ವೋ ಅಲ್ಲಿಂದ ರಶ್ಮಿಕಾ ಹಿಂದೆ ಹೋಗಬೇಕು ಅಂದವರ ಸಂಖ್ಯೆ ಹೆ್ಚ್ಚಾಯ್ತು. ಹಾಗಾಗಿಯೇ ರಶ್ಮಿಕಾಗೆ ಸದ್ಯ ಬಂಪರ್ ಆಫರ್ ಗಳೇ ಹುಡುಕಿ ಬರುತ್ತಿವೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ನಿರ್ದೇಶಕ ಸುಕುಮಾರ್ ಅವರ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿ. ಅದೂ ಪ್ಯಾನ್ ಇಂಡಿಯಾ ಸ್ಟಾರ್ ನಟ ಈ ಸಿನಿಮಾದ ಹೀರೋ ಅನ್ನೋದು ವಿಶೇಷ. ‘ಪುಷ್ಪ 2’ ಸಿನಿಮಾ ಶೂಟಿಂಗ್ ವೇಳೆಯೇ ಸುಕುಮಾರ್, ತಮ್ಮ ಮುಂದಿನ ಸಿನಿಮಾವನ್ನು ರಾಮ್ ಚರಣ್ ಅವರಿಗೆ ಮಾಡುವುದಾಗಿ ಘೋಷಿಸಿದ್ದರು. ಅಂತೆಯೇ ಇದೀಗ ರಾಮ್ ಚರಣ್ ಹಾಗೂ ಸುಕುಮಾರ್ ಸಿನಿಮಾಗೆ ಅಖಾಡ ಸಜ್ಜಾಗಿದೆ. ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ಮೂಲಕ ಸುಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ರಶ್ಮಿಕಾ , ಸುಕುಮಾರ್ ಅವರ ಬಗ್ಗೆ ಪುಷ್ಪ 2 ರಿಲೀಸ್ ವೇಳೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಇದೀಗ ಸುಕುಮಾರ್ ಅವರ ಹೊಸ ಸಿನಿಮಾದ ನಾಯಕಿಯಾಗಿ ಮತ್ತೆ ರಶ್ಮಿಕಾ ಆಯ್ಕೆಯಾಗಿದ್ದಾರೆ. ಆ ಮೂಲಕ ಸುಕುಮಾರ್ ನಿರ್ದೇಶನದ ಹ್ಯಾಟ್ರಿಕ್ ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ಸುದ್ದಿಯಾಗಿದ್ದಾರೆ.
ಸುಕುಮಾರ್ ಹಾಗೂ ರಾಮ್ ಚರಣ್ ಈ ಹಿಂದೆ ‘ರಂಗಸ್ಥಲಂ ಸಿನಿಮಾಗೆ ಒಟ್ಟಿಗೆ ಕೆಲಸ ಮಾಡಿದ್ದರು. ಸೋತು ರೋಸಿದ್ದ ರಾಮ್ ಚರಣ್ ಅವರಿಗೆ ‘ರಂಗಸ್ಥಲಂ’ ಬ್ಲಾಕ್ ಬಸ್ಟರ್ ಆಗಿ ದೊಡ್ಡ ಗೆಲುವು ತಂದುಕೊಟ್ಟಿತ್ತು. ಆ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿದ್ದರು. ಈಗ ಸುಕುಮಾರ್ ಮತ್ತು ರಾಮ್ ಚರಣ್ ಪುನಃ ಜೊತೆಯಾಗುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನ ಈ ಸಿನಿಮಾ ಭವಿಷ್ಯದ ಕಥಾಹಂದರ ಇರುವ ಸಿನಿಮಾ ಎನ್ನಲಾಗುತ್ತಿದೆ.
ರಾಮ್ ಚರಣ್ ಸದ್ಯ ಸುಕುಮಾರ್ ಅವರ ಸಹಾಯಕನಾಗಿದ್ದ ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅತ್ತ ರಶ್ಮಿಕಾ ಮಂದಣ್ಣ ಕೂಡ ಐದು ಚಿತ್ರಗಳಲ್ಲಿ ಬಿಜಿ. ಸಲ್ಮಾನ್ ಖಾನ್ ಜೊತೆ ‘ಸಿಖಂಧರ್’, ಧನುಶ್ ಜೊತೆ ‘ಕುಬೇರ’, ತೆಲುಗಿನ ‘ಗರ್ಲ್ಫ್ರೆಂಡ್’, ಹಿಂದಿಯಲ್ಲಿ ನವಾಜುದ್ದೀನ್ ಸಿದ್ಧಿಖಿ, ಆಯುಷ್ಮಾನ್ ಖುರಾನಾ ನಟನೆಯ ‘ತಮ’ ಮತ್ತು ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ 2’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈಗ ರಾಮ್ ಚರಣ್ ಜೊತೆಯಲ್ಲೂ ಸ್ಟೆಪ್ ಹಾಕೋಕೆ ರೆಡಿಯಾಗಲಿದ್ದಾರೆ ರಶ್ಮಿಕಾ.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ