Sandalwood News: ನಟ ಶಿವರಾಜಕುಮಾರ್ ಅಂದಾಕ್ಷಣ ನೆನಪಾಗೋದೇ ಅವರ ಅದ್ಭುತ ಸ್ಟೆಪ್ಸ್. ಅಷ್ಟೇ ಅಲ್ಲ, ಆಕ್ಷನ್ ಸೀಕ್ವೆನ್ಸ್ ನಲ್ಲಿ ಕೈಯಲ್ಲಿ ಹಿಡಿಯೋ ಲಾಂಗು ಅಥವಾ ಮಚ್ಚು. ಕಣ್ಣಲ್ಲೇ ಎಲ್ಲರನ್ನೂ ಮೆಚ್ಚಿಸುವಂತಹ ಶಿವಣ್ಣ ಅನಾರೋಗ್ಯದಿಂದ ಇರೋದು ಎಲ್ಲರಿಗೂ ಗೊತ್ತು. ಸ್ವತಃ ಶಿವಣ್ಣ ಅವರೇ ಅನಾರೋಗ್ಯ ಕುರಿತು ಬಹಿರಂಗ ಹೇಳಿಕೆ ಕೊಟ್ಟಿದ್ದರು. ನಾನೂ ಮನುಷ್ಯ, ನನಗೂ ಅನಾರೋಗ್ಯವಿದೆ. ಹಾಗಾಗಿ ಇಷ್ಟರಲ್ಲೇ ಸರ್ಜರಿಗಾಗಿ ಅಮೆರಿಕಾಗೆ ತೆರಳುವುದಾಗಿ ಹೇಳಿಕೊಂಡಿದ್ದರು. ಆ ಸಮಯ ಬಂದಿದೆ. ಡಿಸೆಂಬರ್ 18ರಂದು ಶಿವಣ್ಣ ಸರ್ಜರಿಗೆ ಅಮೆರಿಕಾ ಪಯಣ ಬೆಳೆಸಿದ್ದಾರೆ. ಅದಕ್ಕೂ ಮೊದಲು ಅವರನ್ನು ಚಿತ್ರರಂಗದ ಅನೇಕ ಗಣ್ಯರು ಭೇಟಿ ಮಾಡಿ ಶುಭ ಹಾರೈಸುತ್ತಿದ್ದಾರೆ.
ಸಿನಿಮಾರಂಗದ ಅನೇಕ ನಟ,ನಟಿಯರು ಕೂಡ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶಿವಣ್ಣ ಆರೋಗ್ಯ ಚೆನ್ನಾಗಿರಲೆಂದು ಪ್ರಾರ್ಥಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆದಷ್ಟು ಬೇಗ ಚಿಕಿತ್ಸೆ ಮುಗಿಸಿಕೊಂಡು ಬನ್ನಿ ಎಂದು ಹಾರೈಸುತ್ತಿದ್ದಾರೆ ಕೂಡ. ಈಗ ಸುದೀಪ್ ಅವರೂ ಕೂಡ ಶಿವರಾಜಕುಮಾರ್ ಅವರ ಮನೆಗೆ ತೆರಳಿ ಶಿವಣ್ಣ ಅವರ ಆರೋಗ್ಯ ಕುರಿತು ಚರ್ಚಿಸಿದ್ದಾರೆ. ಅವರ ಮನೆಗೆ ಹೋಗುತ್ತಿದ್ದಂತೆಯೇ ಸುದೀಪ್ ಶಿವರಾಜಕುಮಾರ್ ಅವರನ್ನು ಬಿಗಿದಪ್ಪಿದ್ದಾರೆ. ಕೆಲಹೊತ್ತು ಮನೆಯಲ್ಲಿ ಕುಳಿತು ಮಾತನಾಡಿದ್ದಾರೆ.
ಶಿವರಾಜಕುಮಾರ್ ಮತ್ತು ಸುದೀಪ್ ಅವರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅದೊಂದು ರೀತಿ ಸಹೋದರತ್ವ ಸಂಬಂಧ. ಅನೇಕ ಕಾರ್ಯಕ್ರಮಗಳಲ್ಲಿ ಸುದೀಪ್ ಶಿವಣ್ಣ ಅವರನ್ನು ಭೇಟಿಯಾದಾಗೆಲ್ಲ, ಶಿವಣ್ಣ ನನ್ನ ಸಹೋದರ. ಅವರಲ್ಲಿ ಇರುವಷ್ಟು ಎನರ್ಜಿ ಯಾರಲ್ಲೂ ಇಲ್ಲ ಅಂತ ಹೇಳುತ್ತಿದ್ದರು. ಒಂದೇ ವೇದಿಕೆಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಹೊಗಳಿಕೆಯ ಮಾತುಗಳನ್ನೇ ಹೇಳುತ್ತಿದ್ದರು. ಸದಾ ಉತ್ಸಾಹದಿಂದ ಇರುವ ಶಿವರಾಜಕುಮಾರ್ ಅವರನ್ನು ಅನಾರೋಗ್ಯ ಕಾಡಿದ್ದು ಸುಳ್ಳಲ್ಲ. ಅವರು ಗಟ್ಟಿ ವ್ಯಕ್ತಿ, ಸದಾ ಹುಮ್ಮಸ್ಸಲ್ಲೇ ಇರುವಂತಹವರು. ಅಂತಹವರಿಗೆ ಅನಾರೋಗ್ಯ ಅಂದಾಗ, ಚಿತ್ರರಂಗವೇ ಬೇಸರಿಸಿದ್ದು ನಿಜ.
ಈಗ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿರುವ ಶಿವಣ್ಣ ಅವರನ್ನು ಮಾತನಾಡಿಸಿರುವ ಸುದೀಪ್, ಶಿವಣ್ಣ ಅವರನ್ನು ಕಂಡೊಡನೆ ಪ್ರೀತಿಯಿಂದಲೇ ಹಗ್ ಮಾಡಿದ್ದಾರೆ. ಆ ಪ್ರೀತಿಯ ಅಪ್ಪುಗೆ ಭಾವನಾತ್ಮಕವಾಗಿತ್ತು. ಈ ಫೋಟೋ ನೋಡಿರುವ ಇವರಿಬ್ಬರ ಫ್ಯಾನ್ಸ್ ನಾನಾ ರೀತಿಯಲ್ಲಿ ಒಳ್ಳೆಯ ಕಮೆಂಟ್ ಹಾಕುತ್ತಿದ್ದಾರೆ. ಅವರಿಬ್ಬರ ಬಾಂಧವ್ಯ ವನ್ನು ಹೊಗಳುತ್ತಿದ್ದಾರೆ.
ಶಿವರಾಜಕುಮಾರ್ ಅವರಿಗೆ ಇರುವ ಅನಾರೋಗ್ಯದ ವಿಚಾರ ತಿಳಿದು ಸುದೀಪ್ ಗಾಬರಿಯಾಗಿದ್ದರು. ಆದರೆ, ಶಿವಣ್ಣ ಅವರ ಪಾಸಿಟಿವ್ ಎನರ್ಜಿ ನೋಡಿದ ಕಿಚ್ಚ ಸುದೀಪ್ ಖುಷಿಪಟ್ಟಿದ್ದಾರೆ. ಅದೇನೆ ಇರಲಿ, ಚಿಕಿತ್ಸೆಗಾಗಿ ಮಿಯಾಮಿಗೆ ತೆರಳುತ್ತಿರುವ ಶಿವಣ್ಣ ಅವರನ್ನು ಭೇಟಿ ಮಾಡಿರುವ ಕಿಚ್ಚ ಸುದೀಪ್, ಶುಭ ಹಾರೈಸಿದ್ದಾರೆ. ಸಂಪೂರ್ಣ ಚೇತರಿಕೆ ಕಾಣಲಿ ಎಂದಿದ್ದಾರೆ.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ