ಬೆಂಗಳೂರು : ಬಹು ನಿರೀಕ್ಷಿತ ಪವನ್ ಒಡೆಯರ್ ನಿರ್ದೇಶನದ , ಜಯಾದಿತ್ಯ ಫಿಲಂಸ್ ಬ್ಯಾನರ್ ನಡಿಯಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದ ರೇಮೊ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ 25ನೇ ತಾರೀಖು ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ.
ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕನಾಗಿ , ಅಶಿಕಾ ರಂಗನಾಥ್ ನಾಯಕಿಯಾಗಿ, ಶರತ್ ಕುಮಾರ್, ಮಧುಬಾಲ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈದಿ ಛಾಯಾಗ್ರಹಣವಿರೋ ಈ ಚಿತ್ರದ ಮೇಲೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ.
ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಿ ಕುಂಬಳ ಕಾಯಿ ಹೊಡೆದು ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ. ಹೊಸ ವರ್ಷಕ್ಕೆ ಚಿತ್ರವನ್ನು ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ. ಈ ನಡುವೆ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡೋದಕ್ಕೆ ಮುಂದಾಗಿದ್ದು, ಈ ಟೀಸರ್ ಅನ್ನು ಚಿತ್ರರಂಗದ ಟಾಪ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಲಾಂಚ್ ಮಾಡ್ತಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗ್ತಿದೆ.