Chikkodi News: ಚಿಕ್ಕೋಡಿ: ಇಂದು ಅಥಣಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸತೀಶ್ ಜಾಾರಕಿಹೊಳಿ, ಹೈಕಮಾಂಡ್ ನಾಯಕರ ಆದೇಶ ಪಾಲನೆ ನನ್ನ ಕರ್ತವ್ಯ. ಅವರ ಆದೇಶದ ಮುಂದೆ ನಾವು ಕುಣಿದಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ಎಚ್ಚರಿಕೆಗೆ ಥಂಡಾ ಹೊಡೆದಿರುವ ಸತೀಶ್ ಜಾರಕಿಹೊಳಿ, ಪಕ್ಷ ಸಂಘಟನೆಯಷ್ಟೇ ನನ್ನ ಕೆಲಸವಾಗಿದೆ. ಸಿಎಂ ಆಗಲು ಕಾಲಾವಕಾಶ ಇದೆ ನಾವು ಕಾಯಬೇಕು ಎಂದು ಸತೀಶ್ ಹೇಳಿದ್ದಾರೆ.
ಅಭಿಮಾನಿಗಳ ಪೂಜೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಗಳು ಪೂಜೆ ಮಾಡುವುದು ಹೊಸದೇನಲ್ಲ. ಮೊದಲಿನಿಂದಲೂ ಪೂಜೆ ಮಾಡ್ತಾರೆ. ಅದು ಅವ್ರ ಅಭಿಮಾನ. ಆದರೆ ನಾವು ತಾಳ್ಮೆಯಿಂದ ಕಾಯಬೇಕು. 2028ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಪರಮೇಶ್ವರ್ ಯಾವ ಸಮಯದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಕೈ ವಲಯದ ತ್ಯಾಗದ ಮಾತಿನ ಕುರಿತು ಸತೀಶ್ ಸೈಲೆಂಟ್ ಆಗಿದ್ದಾರೆ. ಈ ಮೊದಲು, ತ್ಯಾಗದ ಮನೋಭಾವ ಕಡಿಮೆಯಾಗಿದೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಎಂ ವಿಚಾರ ನನ್ನ ಮುಂದಿಲ್ಲ, ಪಕ್ಷ ಸಂಘಟನೆ ಮಾತ್ರ ನನ್ನ ಗುರಿ. ಹೈಕಮಾಂಡ್ ಸೂಚನೆಯಂತೆ ನಡೆಯಲು ತೀರ್ಮಾನ ಎಂದು ಸತೀಶ್ ಹೇಳಿದ್ದಾರೆ. ಇನ್ನು ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸತೀಶ್, ಪ್ಲೀಸ್ ಪ್ಲೀಸ್ ಅದೆಲ್ಲಾ ಕೇಳ್ಬೇಡಿ, ನಾನೊಂದು ಹೇಳೋದು ಸಂಜೆ ಬೇರೊಂದು ಆಗೆತೈತಿ. ಅದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ ಅದನ್ನು ಕೇಳ್ಬೇಡಿ ಎಂದಿದ್ದಾರೆ.
ಈ ಹಿಂದೆ ಸತೀಶ್ ಜಾರಕಿಹೊಳಿ 2028ಕ್ಕೆ ನಾನೇ ಸಿಎಂ ಎಂದಿದ್ದರು. ಆದರೆ ಇದೀಗ ಹೈಕಮಾಂಡ್ ಆದೇಶ ಬಂದ ಬಳಿಕ ಸೈಲೆಂಟ್ ಆಗಿರುವ ಸತೀಶ್, ಕಾಂಗ್ರೆಸ್ ಅಧಿಕಾರಕ್ಕೆ ತರೋದೇ ನಮ್ಮ ಗುರಿ ಎಂದಿದ್ದಾರೆ.