Sunday, June 22, 2025

Latest Posts

ಮೂರು ಸಾತ್ವಿಕ ಚಪಾತಿ ಮತ್ತು ಸಾತ್ವಿಕ ಪಲ್ಯದ ರೆಸಿಪಿ..

- Advertisement -

ನಾವು ಸಾಧಾರಣವಾಗಿ ಗೋಧಿ ಹಿಟ್ಟಿನ ಚಪಾತಿ ಮಾಡ್ತೇವೆ. ಆದ್ರೆ ಇದೇನಿದು ಸಾತ್ವಿಕ ಚಪಾತಿ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ, ಇದು ತರಕಾರಿಯೊಂದಿಗೆ ಮಾಡುವ ಚಪಾತಿ. ಇದರಲ್ಲಿ ಅರ್ಧ ಭಾಗ ತರಕಾರಿ ಮತ್ತು ಅರ್ಧ ಭಾಗ ಗೋಧಿ ಹಿಟ್ಟನ್ನ ಬಳಸಿ ಚಪಾತಿ ತಯಾರಿಸಲಾಗತ್ತೆ. ಇದರ ಜೊತೆಗೆ ಸಾತ್ವಿಕ ಪಲ್ಯದ ರೆಸಿಪಿನೂ ಇದೆ. ಹಾಗಾದ್ರೆ ಮೂರು ಸಾತ್ವಿಕ ಚಪಾತಿ ರೆಸಿಪಿ ಮತ್ತು ಪಲ್ಯದ ರೆಸಿಪಿಯನ್ನ ತಿಳಿಯೋಣ ಬನ್ನಿ..

ಮೊದಲನೇಯದ್ದು ಬೀಟ್ರೂಟ್ ಚಪಾತಿ. ಒಂದು ಕಪ್ ಸಣ್ಣಗೆ ತುರಿದ ಬಿಟ್‌ರೂಟ್, ಒಂದು ಕಪ್ ಗೋಧಿ ಹಿಟ್ಟು, ನೀರು, ಬೇಕಾದಲ್ಲಿ ಉಪ್ಪು ಸೇರಿಸಿ, ಹಿಟ್ಟು ತಯಾರಿಸಿಕೊಳ್ಳಿ. ಈ ಹಿಟ್ಟಿನಿಂದ ಚಪಾತಿ ಲಟ್ಟಿಸಿ, ತುಪ್ಪ, ಎಣ್ಣೆ, ಬೆಣ್ಣೆ ಏನೂ ಹಾಕದೇ, ಚಪಾತಿ ತಯಾರಿಸಿ ತಿನ್ನಿ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದಕ್ಕೆ ಎಣ್ಣೆ, ಬೆಣ್ಣೆ ಹಾಕದ ಕಾರಣ ಇದರ ಸೇವನೆಯಿಂದ ಬೊಜ್ಜು ಬೆಳೆಯುವುದಿಲ್ಲ. ಮುಖದಲ್ಲಿ ಮೊಡವೆ, ಕೂದಲು ಉದುರುವ ಸಮಸ್ಯೆ ಇದ್ಯಾವುದೂ ಕಾಣಿಸಿಕೊಳ್ಳುವುದಿಲ್ಲ.

ಎರಡನೇಯದ್ದು ಪಾಲಕ್ ಚಪಾತಿ. ಒಂದು ಕಪ್ ಪಾಲಕ್ ಪೇಸ್ಟ್, ಒಂದು ಕಪ್ ಗೋಧಿ ಹಿಟ್ಟು, ನೀರು, ಬೇಕಾದ್ದಲ್ಲಿ ಉಪ್ಪು ಸೇರಿಸಿ ಹಿಟ್ಟು ತಯಾರಿಸಿ. ಈ ಹಿಟ್ಟಿನಿಂದ ಚಪಾತಿ ಲಟ್ಟಿಸಿ, ಫುಲ್ಕಾ ರೀತಿ ಬೇಯಿಸಿದರೆ, ಪಾಲಕ್ ಚಪಾತಿ ರೆಡಿ. ನೀವು ಸಾತ್ವಿಕ ಚಪಾತಿಗೆ ಉಪ್ಪು ಹಾಕದೇ ತಿಂದರೆ ಉತ್ತಮ. ಉಪ್ಪು ಬಳಸಬೇಕೆಂದಲ್ಲಿ ಸೇಂಧವ ಲವಣವನ್ನು ಬಳಸಿ. ಅಲ್ಲದೇ, ಸಾತ್ವಿಕ ತಿಂಡಿಯನ್ನ ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದರೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೂರನೇಯದ್ದು ಸೌತೇಕಾಯಿ ಚಪಾತಿ. ಸೌತೇಕಾಯಿಯನ್ನ ಪೇಸ್ಟ್ ಮಾಡಿ. ಒಂದು ಕಪ್ ಸೌತೇಕಾಯಿ ಪೇಸ್ಟ್, ಒಂದು ಕಪ್ ಗೋಧಿ ಹಿಟ್ಟು, ನೀರು ಸೇರಿಸಿ, ಹಿಟ್ಟು ತಯಾರಿಸಿಕೊಳ್ಳಿ. ಇದರಿಂದ ಚಪಾತಿ ಮಾಡಿ, ಫುಲ್ಕಾ ರೀತಿ ಬೇಯಿಸಿದರೆ ಸೌತೇಕಾಯಿ ಚಪಾತಿ ರೆಡಿ. ನಾವು ಯಾವಾಗಲೂ ಮಾಡುವ ಗೋಧಿಹಿಟ್ಟಿನ ಚಪಾತಿ ತಿಂದ್ರೆ, ಅದನ್ನ ಜೀರ್ಣಿಸಿಕೊಳ್ಳೋಕ್ಕೆ 18 ಗಂಟೆ ಬೇಕಾಗುತ್ತದೆ. ಆದ್ರೆ ಈ ತರಕಾರಿಗಳ ಚಪಾತಿ ಮಾಡಿ ತಿಂದ್ರೆ ಕೇವಲ 9 ಗಂಟೆಗಳಲ್ಲಿ ಅದನ್ನ ಜೀರ್ಣಿಸಿಕೊಳ್ಳಬಹುದು.

ನೀವು ಇದೇ ರೀತಿ, ಹಲವಾರು ತರಕಾರಿಗಳನ್ನ ಬಳಸಿ ಚಪಾತಿ ತಯಾರಿಸಿಕೊಳ್ಳಬಹುದು. ಕೊತ್ತೊಂಬರಿ ಸೊಪ್ಪು, ಕ್ಯಾರೆಟ್, ಹೀರೇಕಾಯಿ, ತೊಂಡೆಕಾಯಿ, ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು ಇವನ್ನೆಲ್ಲ ಬಳಸಿ ಇಂಥ ಸಾತ್ವಿಕ ಚಪಾತಿ ತಯಾರಿಸಬಹುದು. ಇದು ತಯಾರಿಸುವುದು ತುಂಬಾ ಈಸಿ. ನೆನಪಿರಲಿ.. ಹಿಟ್ಟನ್ನ ಬಳಸುವ ಮೊದಲು ಜರಡಿಯಲ್ಲಿ ಅದನ್ನ ಆರಿಸಿಕೊಳ್ಳಿ. ನೀರು ಅಗತ್ಯವಿದ್ದಲ್ಲಿ ಮಾತ್ರ ಬಳಸಿ.

ಚಪಾತಿ ರೆಸಿಪಿ ನಂತರ, ಅದಕ್ಕಾಗಿ ಸಾತ್ವಿಕ ಪಲ್ಯ ತಯಾರಿಸುವುದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಸಾತ್ವಿಕ ಪಲ್ಯದಲ್ಲಿ ಎಣ್ಣೆ, ಸಾಧಾರಣ ಉಪ್ಪು, ಖಾರಾ, ಗರಂ ಮಸಾಲೆ ಇವೆಲ್ಲವನ್ನ ಬಳಸಲಾಗುವುದಿಲ್ಲ. ಇದರ ಬದಲು ಒಣಕೊಬ್ಬರಿ ತುರಿ, ಮೆಣಸಿನ ಕಾಯಿ, ಸೇಂಧವ ಲವಣವನ್ನ ಬಳಸಲಾಗತ್ತೆ. ಹಾಗಾದ್ರೆ ಸಾತ್ವಿಕ ಪಲ್ಯದ ರೆಸಿಪಿಗೆ ಬೇಕಾಗುವ ಸಾಮಗ್ರಿ ಮತ್ತು ಅದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಈ ಪಲ್ಯಗಳನ್ನ ತಯಾರಿಸೋಕ್ಕೆ ನಾವು ಮೊದಲು ಗ್ರೇವಿ ರೆಡಿ ಮಾಡೋಣ. ಎರಡು ಟೋಮೆಟೋ, ಒಂದು ಕಪ್ ಕೊಬ್ಬರಿ ತುರಿ, ಒಂದು ಹಸಿ ಮೆಣಸಿನ ಕಾಯಿ, ಖಾರ ಬೇಕಾದ್ದಲ್ಲಿ ಹೆಚ್ಚು ಬಳಸಿ. ಅಗತ್ಯಕ್ಕೆ ತಕ್ಕಷ್ಟು ಸೇಂಧವ ಲವಣ. ಒಂದು ಸ್ಪೂನ್ ಹುರಿದ ಜೀರಿಗೆ ಪುಡಿ, ಚಿಕ್ಕ ತುಂಡು ಶುಂಠಿ. ಇವೆಲ್ಲವನ್ನು ಮಿಕ್ಸಿ ಜಾರ್‌ಗೆ ಹಾಕಿ ಗ್ರೇವಿ ತಯಾರಿಸಿಟ್ಟುಕೊಳ್ಳಿ.

ಮೊದಲನೇಯದ್ದು ಗೋಬಿ- ಆಲೂ ಪಲ್ಯ. ಮೊದಲು ಮಣ್ಣಿನ ಪಾತ್ರೆಯನ್ನು ಒಲೆಯ ಮೇಲಿರಿಸಿ, ಅದರಲ್ಲಿ ಒಂದು ಕಪ್ ಗೋಬಿ ಮತ್ತು ಒಂದು ಕಪ್ ಆಲೂ, ಅರ್ಧ ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಐದೇದು ನಿಮಿಷಕ್ಕೊಮ್ಮೆ ಅದನ್ನು ಹರಿಯಿರಿ. ತಳ ಹಿಡಿಯದಂತೆ ನೋಡಿಕೊಳ್ಳಿ. ನಂತರ ರೆಡಿ ಮಾಡಿಟ್ಟುಕೊಂಡ ಗ್ರೇವಿಯನ್ನು ಸೇರಿಸಿ, ಗ್ಯಾಸ್ ಆಫ್ ಮಾಡಿ, ಮುಚ್ಚಳಮುಚ್ಚಿ, ಹಾಗೇ ಬೇಯಲು ಬಿಡಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನ ಚಿಕ್ಕದಾಗಿ ಕತ್ತರಿಸಿ, ಗಾರ್ನಿಶ್ ಮಾಡಿ, ಸವಿಯಲು ಕೊಡಿ.

ಎರಡನೇಯದ್ದು ಕ್ಯಾರೆಟ್, ಬಟಾಣಿ ಪಲ್ಯ. ಒಂದು ಮಣ್ಣಿನ ಪಾತ್ರೆಯನ್ನು ಒಲೆಯ ಮೇಲಿರಿಸಿ, ಕ್ಯಾರೇಟ್ ಮತ್ತು ಬಟಾಣಿಗೆ ಅರ್ಧ ಕಪ್ ನೀರು ಹಾಕಿ 15 ನಿಮಿಷ ಬೇಯಿಸಬೇಕು. ಈ ತರಕಾರಿ ಬೆಂದ ಬಳಿಕ, ರೆಡಿ ಮಾಡಿಟ್ಟುಕೊಂಡ ಗ್ರೇವಿಯನ್ನ ಸೇರಿಸಿ, ಮುಚ್ಚಳ ಮುಚ್ಚಿ, ಗ್ಯಾಸ್ ಆಫ್ ಮಾಡಿ. 10 ನಿಮಿಷ ಆ ಮುಚ್ಚಳವನ್ನ ಹಾಗೆ ಮುಚ್ಚಿಡಿ, ನಂತರ ಸಣ್ಣಗೆ ಹೆಚ್ಚಿನ ಕೊತ್ತೊಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ, ಸವಿಯಿರಿ.

- Advertisement -

Latest Posts

Don't Miss