ನಿನ್ನೆಯಷ್ಟೇ ಕನ್ನಡಿಗ ನವೀನ್ ಉಕ್ರೇನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಇನ್ನೋರ್ವ ಭಾರತೀಯ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಾವನ್ನಪ್ಪಿದ್ದಾನೆ. ಪಂಜಾಬ್ ಮೂಲಕ ಚಂದನ್ ಜಿಂದಾಲ್(22) ಸ್ಟ್ರೋಕ್‌ನಿಂದ ಮೃತ ಪಟ್ಟಿದ್ದಾನೆ.
ಉಕ್ರೇನ್‌ನ ವಿನ್ನಿಸ್ಟಿಯಾ ಎಂಬಲ್ಲಿ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿಗೆ ಸ್ಟ್ರೋಕ್ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ, ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಸ್ಕೇಮಿಕ್ ಸ್ಟ್ರೋಕ್‌ನಿಂದ ಈತ ಬಳಲಿದ್ದು, ಮೆದುಳಿಗೆ ಸರಿಯಾಗಿ ರಕ್ತ ಪೂರೈಕೆಯಾಗದೇ, ಚಂದನ್ ಸಾವನ್ನಪ್ಪಿದ್ದಾನೆಂದು ಹೇಳಲಾಗಿದೆ. ಈ ವಿಷಯವನ್ನು ಚಂದನ್ ಕುಟುಂಬಸ್ಥರಿಗೆ ತಿಳಿಸಲಾಗಿದ್ದು, ಮಗನ ಮೃತದೇಹವನ್ನು ತರಲು ಸಹಾಯ ಮಾಡುವಂತೆ, ಕುಟುಂಬಸ್ಥರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈಗಾಗಲೇ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ತಿಂಡಿ ತರಲು ಹೋದ ಸಮಯದಲ್ಲಿ ಬಾಂಬ್ ದಾಳಿಗೆ ಮೃತಪಟ್ಟಿದ್ದಾರೆ. ಅವರಿಗೂ ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಉಳಿಸಿಕೊಳ್ಳಲು ಆಗಲಿಲ್ಲ. ಇದುವರೆಗೂ ನವೀನ್ ಮೃತದೇಹ ಭಾರತಕ್ಕೆ ಬರಲಿಲ್ಲ. ಕೊನೆಯ ಬಾರಿ ನವೀನ್‌ನನ್ನು ಕಾಣಬೇಕೆಂದು ನವೀನ್ ಪೋಷಕರು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.