ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನವನ್ನು ನಿರ್ಬಂಧಿಸುವ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಹಿನ್ನಡೆ ತಗುಲಿದೆ. ಆರ್‌ಎಸ್‌ಎಸ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಮಂಗಳವಾರ ಸರ್ಕಾರದ ಆದೇಶದ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿದೆ.
ರಾಜ್ಯ ಸರ್ಕಾರವು 10 ಜನಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ಅಕ್ರಮ ಕೂಟ ಎಂದು ಪರಿಗಣಿಸಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಸಂಸ್ಥೆ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಬಳಿಕ ಹೈಕೋರ್ಟ್ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಹುಬ್ಬಳ್ಳಿ ಪೊಲೀಸ್ ಕಮಿಷನರ್‌ಗಳಿಗೆ ನೋಟಿಸ್ ನೀಡಿದೆ.
2025ರ ಅಕ್ಟೋಬರ್ 10ರಂದು ಸರ್ಕಾರ ಹೊರಡಿಸಿದ್ದ ಆ ಆದೇಶದ ಪ್ರಕಾರ, ರಸ್ತೆ, ಪಾರ್ಕ್, ಮೈದಾನ, ಕೆರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸ್ ಕಾಯ್ದೆಯ ಅಧಿಕಾರವನ್ನು ಆಧಾರವನ್ನಾಗಿ ಮಾಡಿಕೊಂಡು ಸರ್ಕಾರ ಈ ಆದೇಶ ಹೊರಡಿಸಿತ್ತು.
ಆದರೆ ಹೈಕೋರ್ಟ್ ಅಭಿಪ್ರಾಯಪಟ್ಟಂತೆ, ಸಂವಿಧಾನದ ಆರ್ಟಿಕಲ್ 19(1)(A) ಮತ್ತು (B) ಅಡಿಯಲ್ಲಿ ನಾಗರಿಕರಿಗೆ ದೊರೆತಿರುವ ಮಾತಿನ ಸ್ವಾತಂತ್ರ್ಯ ಹಾಗೂ ಸಭೆ ಆಯೋಜನೆ ಹಕ್ಕುಗಳನ್ನು ಸರ್ಕಾರ ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರದ ನಿರ್ಬಂಧದ ಆದೇಶದ ವಿರುದ್ಧ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ ಎರಡನೇ ವಾರಕ್ಕೆ ಮುಂದೂಡಿದೆ.
ಇನ್ನು ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ನೇತೃತ್ವದಲ್ಲಿ ಶಾಂತಿ ಸಭೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಸಭೆ ಆಯೋಜಿಸಲಾಗಿದ್ದು, ಅಕ್ಟೋಬರ್ 25ರಂದು ಅನುಮತಿ ಕೋರಿದ್ದ 10 ಸಂಘಟನೆಗಳಿಗೆ ನೋಟಿಸ್ ಜಾರಿಯಾಗಿದೆ. ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಸದಸ್ಯರಿಗೆ ಹಾಜರಾಗಲು ಹಾಗೂ ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆರ್‌ಎಸ್‌ಎಸ್ ಹೊರತುಪಡಿಸಿ, ಭಾರತೀಯ ದಲಿತ ಪ್ಯಾಂಥರ್, ಭೀಮ್ ಆರ್ಮಿ, ಗೊಂಡ-ಕುರುಬ ಎಸ್ಟಿ ಹೋರಾಟ ಸಮಿತಿ, ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ 10 ಸಂಘಟನೆಗಳು ನವೆಂಬರ್ 2ರಂದು ಪಥಸಂಚಲನ-ಮೆರವಣಿಗೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಅಕ್ಟೋಬರ್ 24ರಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಎಲ್ಲಾ ಸಂಘಟನೆಗಳೊಂದಿಗೆ ಅಕ್ಟೋಬರ್ 28ರಂದು ಶಾಂತಿ ಸಭೆ ನಡೆಸಿ, ಅಕ್ಟೋಬರ್ 30ರಂದು ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಅದರಂತೆ ಕಲಬುರಗಿಯಲ್ಲಿ ಶಾಂತಿ ಸಭೆ ಪ್ರಾರಂಭವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

