Political News: ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ದುರ್ಮರಣ ಹೊಂದಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದಿಂದ ಪೊಲೀಸ್ ಅಧಿಕಾರಿಗಳ ಅಮಾನತು ನಾಚಿಕೆಗೇಡು..
ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ಇಡೀ ಸರ್ಕಾರವೇ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಆರ್.ಸಿ.ಬಿ ವಿಜಯೋತ್ಸವದ ಆಚರಣೆಗೆ ಮುಂದಾಗಿ, ಇಂತಹ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ, ತಮ್ಮ ನೈತಿಕ ಜವಾಬ್ದಾರಿಯನ್ನು ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾಳ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್ ಸರ್ಕಾರ..!
ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸಿ, ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.
ನೈತಿಕತೆ ಇದ್ರೆ ಸಿಎಂ, ಡಿಸಿಎಂ ಹೋಂ ಮಿನಿಸ್ಟರ್ ರಾಜೀನಾಮೆ ನೀಡಲಿ..
ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಲಿ ಎಂದು ಯಡಿಯೂರಪ್ಪ ತಮ್ಮ ಟ್ವೀಟ್ಟರ್ ಪೋಸ್ಟ್ನಲ್ಲಿ ಆಗ್ರಹಿಸಿದ್ದಾರೆ.
ಅಮಾನತಾದ ದಯಾನಂದ್ ಪರ ಜೋರಾಯ್ತು ಕೂಗು..
ಇನ್ನೂ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ರಾಜ್ಯ ಸರ್ಕಾರ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿದಂತೆ ಹಲವು ಅಧಿಕಾರಿಗಳನ್ನು ಅಮಾನತು ಮಾಡಿದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಸಹ ದಯಾನಂದ್ ಅಮಾನತು ವಿರೋಧಿಸಿ ಅಭಿಯಾನವು ಜೋರಾಗಿ ನಡೆಯುತ್ತಿದ್ದು, ಸರ್ಕಾರದ ನಿರ್ಧಾರದ ನಡೆಯನ್ನು ಕಟುವಾಗಿ ಟೀಕಿಸಲಾಗುತ್ತಿದೆ. ಅಲ್ಲದೆ ದಯಾನಂದ್ ಆಮಾನತು ವಾಪಸ್ ಪಡೆಯಬೇಕೆಂದು ಒತ್ತಾಯದ ಕೂಗು ಜೋರಾಗಿದೆ. ಆದರೆ ಸರ್ಕಾರ ಮಾತ್ರ ತಾನು ಮಾಡಿದ್ದು ಸರಿ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ.