Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪವನ್ನು ಉಲ್ಲೇಖಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಸರ್ಕಾರದ ಈ ನಡೆಯಿಂದ ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಆಕ್ರೋಶ ಹೆಚ್ಚಾಗಿದೆ.
ಇನ್ನೂ ಗುರುವಾರ ನಡೆದ ಸಂಪುಟ ಸಭೆಯ ಬಳಿಕ ತುರ್ತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬುಧವಾರ ನಡೆದ ಅಹಿತಕರ ಘಟನೆ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಹಾಗೂ ಗಂಭೀರವಾಗಿ ಚರ್ಚೆ ಮಾಡಿದ್ದು, ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಮೊದಲನೆಯದಾಗಿ ಘಟನೆ ಬಗ್ಗೆ ವರದಿ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ಮೈಕಲ್ ಡಿ ಕುನ್ಹಾ ಅವರ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ಸಂಸ್ಥೆಗಳ ವಿರುದ್ಧ ಬಿತ್ತು ಕೇಸ್..
ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದುಃಖಕರವಾಗಿದ್ದು, ಮೃತಪಟ್ಟವರಿಗೆ ಸಂತಾಪ ಕೋರಲಾಯಿತು. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ಆರ್ಸಿಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಿದ್ದಾರೆ. ಈಗಾಗಲೇ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ಅಮಾನತಿಗೆ, ಅಧಿಕಾರಿಗಳಲ್ಲಿ ಬೇಜವಾಬ್ದಾರಿತನ ಕಂಡು ಬರುತ್ತಿದೆ..
ಅಲ್ಲದೆ ಘಟನೆಯಲ್ಲಿ ಕರ್ತವ್ಯ ಲೋಪದ ಆರೋಪದಲ್ಲಿ ನಗರ ಪೊಲೀಸ್ ಆಯುಕ್ತರು ಸೇರಿ ಹಲವು ಹಿರಿಯ ಅಧಿಕಾರಿಗಳ ಅಮಾನತು ಮಾಡಲಾಗಿದೆ. ತಕ್ಷಣದಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ. ಈ ದುರಂತಕ್ಕೆ ಸಂಬಂಧಪಟ್ಟ ಚರ್ಚೆಯ ನಂತರ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಘಟನೆ ನಮ್ಮನ್ನು ತುಂಬಾ ಘಾಸಿಗೊಳಿಸಿದೆ, ಸಿಎಂ ಭಾವುಕ..!
ನನ್ನ ರಾಜಕೀಯ ಜೀವನದಲ್ಲಿ ನಾನು ಶಾಸಕ, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನಮ್ಮನ್ನು ತುಂಬಾ ಘಾಸಿಗೊಳಿಸಿದೆ ಎಂದು ಭಾವುಕರಾಗಿದ್ದಾರೆ. ಆಲ್ಲದೆ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ ಎಂದು ಅಭಯ ನೀಡಿದ್ದಾರೆ.
ಇನ್ನೂ ಪ್ರಮುಖವಾಗಿ ಈಗಾಗಲೇ ಆದೇಶ ನೀಡಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದೆ. ಈ ಮಹಾ ದುರಂತದ ಬಗ್ಗೆ ಕೆಲವು ಮಾಹಿತಿಗಳು ದೊರೆತ ನಂತರ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮೂರು ಸಂಸ್ಥೆಗಳ ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯಾವೆಲ್ಲ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್..!
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ , ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್.ಎ.ಕೆ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜನಾಕ್ರೋಶಕ್ಕೆ ಕಾರಣವಾದ ಸರ್ಕಾರದ ನಡೆ..
ಅಲ್ಲದೆ ಘಟನೆ ನಡೆದ ಒಂದು ದಿನದ ನಂತರ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಈಗ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ನಿಜವಾಗಿಯೂ ಈ ದುರಂತಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಯ ನಡುವೆಯೇ ಅಧಿಕಾರಿಗಳ ತಲೆದಂಡವಾಗಿದೆ. ಅಷ್ಟಕ್ಕೂ ಪೊಲೀಸ್ ಅಧಿಕಾರಿಗಳ ಬಗ್ಗೆ ತನಿಖೆಯನ್ನು ಮಾಡದೇ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂತ ಶರಾ ಬರೆದು ಸರ್ಕಾರ ಅಮಾನತು ಶಿಕ್ಷೆ ನೀಡಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಹರಕೆ ಕುರಿಯಾದ್ರಾ ಕಮಿಷನರ್ ದಯಾನಂದ್..?
ಇನ್ನೂ ಅಮಾನತಾಗಿರುವ ನಗರ ಪೊಲೀಸ್ ಆಯುಕ್ತ ಬ ದಯಾನಂದ್ ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬೃಹತ್ ಅಭಿಯಾನವೇ ಪ್ರಾರಂಭವಾಗಿದೆ. ತನ್ನ ತಪ್ಪಿನಿಂದ ಪರಾರಿಯಾಗಲು ಸರ್ಕಾರ ಇತಿಹಾಸದಲ್ಲೇ ಮೊದಲು ಕಮಿಷನರ್ ಅವರನ್ನು ಸಸ್ಪೆಂಡ್ ಮಾಡಿದೆ. ಇದಕ್ಕೆ ನೇರವಾಗಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಪ್ರಮುಖವಾಗಿ ತಮ್ಮ ತಪ್ಪಿಗಾಗಿ ಖಾಕಿಯನ್ನು ಹರಕೆ ಕುರಿ ಮಾಡಿತೆ ಸರ್ಕಾರ..? ಎಂಬೆಲ್ಲ ಹತ್ತಾರು ಪ್ರಶ್ನೆಗಳು ಉಧ್ವವಿಸಿದೆ.