Sports News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ಸಂಭ್ರಮಾಚರಣೆಗೂ ಮುನ್ನ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 47 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇನ್ನೂ ಐಪಿಎಲ್ ಇತಿಹಾಸದಲ್ಲಿಯೇ ಕರಾಳ ಅಧ್ಯಾಯ ಎನ್ನಲಾಗುತ್ತಿರುವ ಈ ದುರ್ಘಟನೆಗೆ ಯಾರು ಹೊಣೆ ಎಂಬ ಪ್ರಶ್ನೆಯ ನಡುವೆಯೇ ಆಡಳಿತ ಹಾಗೂ ವಿಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ಜೋರಾಗಿಯೇ ನಡೆಯುತ್ತಿದೆ.
ಇನ್ನೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿರುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐಗೆ ಮಾಹಿತಿ ಇದ್ದೆ ಈ ವಿಜಯೋತ್ಸವ ಆಯೋಜನೆ ಮಾಡಲಾಗಿತ್ತಾ..? ಅಥವಾ ಅವರೂ ಇದಕ್ಕೆ ಸಮ್ಮತಿ ಸೂಚಿಸಿದ್ರಾ ಎನ್ನುವ ಅನೇಕ ಪ್ರಶ್ನೆಗಳು ಎದ್ದಿದ್ದವು. ಆದರೆ ಇದೀಗ ಈ ಎಲ್ಲ ಪ್ರಶ್ನೆಗಳಿಗೆ ಬಿಸಿಸಿಐ ಮೌನ ಮುರಿದಿದ್ದು, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವ ಉತ್ತರವನ್ನು ನೀಡಿದೆ.
ಇದಕ್ಕೂ ನಮಗೂ ಸಂಬಂಧಬಿಲ್ಲ, ಅದು ಅವರ ಜವಾಬ್ದಾರಿ..!
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ, ಬೆಂಗಳೂರಿನಲ್ಲಿ ನಡೆದ ಘಟನೆ ದುರದೃಷ್ಟಕರ; ಪ್ರತಿಯೊಂದು ಜೀವವೂ ಅಮೂಲ್ಯ. ಐಪಿಎಲ್ ಸಮಾರೋಪ ಸಮಾರಂಭದವರೆಗೆ ಮಾತ್ರ ನಾವು ಜವಾಬ್ದಾರರಾಗಿರುತ್ತೇವೆ. ಇದು ಆರ್ಸಿಬಿಯ ಕಾರ್ಯಕ್ರಮ ಆಗಿದ್ದರಿಂದ ಬಿಸಿಸಿಐಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ್ದು, ದುರಂತದ ಚಂಡು ಇದೀಗ ರಾಜ್ಯ ಸರ್ಕಾರ, ರಾಜ್ಯ ಕ್ರಿಕೆಟ್ ಮಂಡಳಿ ಹಾಗೂ ಆರ್‌ಸಿಬಿ ಫ್ರಾಂಚೈಸಿ ಅಂಗಳಕ್ಕೆ ಬಂದು ತಲುಪಿದಂತಾಗಿದೆ.
ನನಸಾಗಿತ್ತು 18 ವರ್ಷಗಳ ಟ್ರೋಫಿ ಕನಸಿನ ಸಂಭ್ರಮ ಉಳಿಯಲಿಲ್ಲ ದೀರ್ಘ ಕಾಲ..
ಅಲ್ಲದೆ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ 2025 ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ 18 ವರ್ಷಗಳ ನಂತರ ಟ್ರೋಫಿಯನ್ನು ಗೆದ್ದುಕೊಂಡಿದೆ.
ಇದಾದ ನಂತರ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಘೋಷಿಸಿತು. ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಬೆಂಗಳೂರು ಪೊಲೀಸರು ಈ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮೆರವಣಿಗೆ ಬದಲಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿತ್ತು. ಈ ವೇಳೆ ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮೈದಾನದ ಬಳಿ ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ್ದರು. ದುರ್ಘಟನೆಯಿಂದ ಸಂಭ್ರಮದಲ್ಲಿದ್ದವರ ಸಂತಸ ದೀರ್ಘಕಾಲ ಉಳಿಯಲಿಲ್ಲ ಎನ್ನುವುದು ನಿಜಕ್ಕೂ ಶೋಚನೀಯ.
ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ದಾಖಲಾಯ್ತು ಸೋಮೋಟೊ ಕೇಸ್..
ಸಂಭ್ರಮದ ಮಧ್ಯೆಯೇ ಈ ಘಟನೆಯಿಂದ ದೇಶಾದ್ಯಂತ ಸೂತಕದ ಛಾಯೆ ಆವರಿಸಿದ್ದು, ಎಲ್ಲೆಡೆ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಇನ್ನೊಂದೆಡೆ ಈ ಘಟನೆಯ ಬಗ್ಗೆ ಹೈಕೋರ್ಟ್ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡರೇ, ಇನ್ನೊಂದೆಡೆ ಕಬ್ಬನ್ ಪಾರ್ಕ್ ಪೊಲೀಸರು ಆರ್‌ಸಿಬಿ ಫ್ರಾಂಚೈಸಿ ಹಾಗೂ ಕೆಎಸ್ಸಿಎ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಬಿಎನ್ಎಸ್ ಕಾಯಿದೆಯ ಸೆಕ್ಷನ್ 195ರ ಅಡಿಯಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಕೇಸ್ ದಾಖಲಾಗಿದೆ.