Sirsi News: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಮಧುರವಳ್ಳಿ-ಹಾಡಲಗಿ ಗ್ರಾಮದ ದೊಡ್ಡಕೆರೆಯಲ್ಲಿ ಕೆರೆಬೇಟೆಯು ಬುಧವಾರ ಸಂಭ್ರಮದಿಂದ ನಡೆಯಿತು.
ಮಧುರವಳ್ಳಿ ಗ್ರಾಮದ ಶ್ರೀ ಮಾರಿಕಾಂಬಾ ಹಾಗೂ ಹಾಡಲಗಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಡೆಯುವ ಕೆರೆಬೇಟೆಯಲ್ಲಿ ಸುತ್ತಮುತ್ತಲಿನ ತಾಲ್ಲೂಕು, ಹಳ್ಳಿಗಳಿಂದ ಆಗಮಿಸಿದ ಹಿರಿಯರು, ಯುವಕರು ಬಿದಿರಿನಿಂದ ಮಾಡಿದ ಕುಣಿಗಳನ್ನು ಹಿಡಿದು ಮೀನು ಬೇಟೆಗೆ ಇಳಿದು ಅದೃಷ್ಟ ಪರೀಕ್ಷೆಗೆ ಮುಂದಾದರು. ಸುಮಾರು ಎರಡು-ಮೂರು ಗಂಟೆಗಳ ಕಾಲ ನಡೆದ ಮತ್ಸ್ಯಬೇಟೆಯ ಸಡಗರದಲ್ಲಿ
ಕೆಲವರಿಗೆ ಮೀನು ಸಿಕ್ಕರೆ, ಇನ್ನೂ ಕೆಲವರು ಮೀನು ಸಿಗದೇ ನಿರಾಸೆಯಿಂದ ಮರಳಿದರು.
ಸಾವಿರಾರು ಜನರು ರಸ್ತೆಯ ಪಕ್ಕದಲ್ಲಿ ನಿಂತು ಕೆರೆ ಬೇಟೆಯ ದೃಶ್ಯ ನೋಡುತ್ತ ಸಂಭ್ರಮಿಸಿದರು. ಕೆರೆಬೇಟೆಯಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೆರೆ ಬೇಟೆಯು ಕೇವಲ ಮೀನು ಹಿಡಿಯುವ ಕಾಯಕ ಅಲ್ಲದೆ ಕ್ರೀಡೆಯ ಮನೋರಂಜನೆಯನ್ನು ನೀಡುತ್ತಿರುವುದರಿಂದ ಸುಮಾರು 1ಸಾವಿರಕ್ಕೂ ಅಧಿಕ ಮತ್ಸ್ಯಬೇಟೆಗಾರರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಒಂದು ಕುಣಿಗೆ 600ರೂ ಶುಲ್ಕವನ್ನು ವಿಧಿಸಲಾಗಿತ್ತು. ಇದರಿಂದ ಬರುವ ಆದಾಯವನ್ನು ಮಧುರವಳ್ಳಿ ಗ್ರಾಮದ ಶ್ರೀ ಮಾರಿಕಾಂಬಾ ಹಾಗೂ ಹಾಡಲಗಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ
ಉಪಯೋಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದರು.
ಕೆರೆಬೇಟೆಯು ಶಾಂತಿಯುತವಾಗಿ ನಡೆದಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಮಾಂತೇಶ ಕುಂಬಾರ, ರವೀಂದ್ರ ಬಿರಾದಾರ ಮಾರ್ಗದರ್ಶನದಲ್ಲಿ ಪೊಲೀಸರಿಂದ ಸೂಕ್ತ ಬಂದೋಬಸ್ತ್ ಆಯೋಜಿಸಲಾಗಿತ್ತು.




