Bengaluru News: ಬೆಂಗಳೂರು: ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯು ಬಿಜೆಪಿಗೆ ಬಹುದೊಡ್ಡ ಆಘಾತವನ್ನೇ ನೀಡಿದೆ. ಚುನಾವಣೆ ಮುಗಿದು ಏಳು ತಿಂಗಳು ಕಳೆದರೂ ರಾಜ್ಯ ಬಿಜೆಪಿಯ ಆಂತರಿಕ ಕಲಹ ಮುಗಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಕರ್ನಾಟಕದ ರಾಜ್ಯ ಘಟಕಕ್ಕೆ ಬಿಎಸ್ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ಹಲವು ನಾಯಕರು ಅಸಮಧಾನದ ಬೆಂಕಿಯನ್ನೇ ಉಗುಳುತ್ತಿದ್ದಾರೆ.
ಲಿಂಗಾಯತ ನಾಯಕರಾದ ಮಾಜಿ ಸಚಿವ ವಿ ಸೋಮಣ್ಣ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಶಾಸಕ ಸಿಟಿ ರವಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ಹಾಗೂ ಸಿಟಿ ರವಿ ಅವರು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು. ಯತ್ನಾಳ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಇವರೆಲ್ಲರ ಆಕಾಂಕ್ಷೆಗಳು ಈಡೇರದ ಕಾರಣ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಬಿಎಸ್‌ವೈ ಫೋನ್ ರಿಸೀವ್ ಮಾಡದ ಸೋಮಣ್ಣ
ವಿಧಾನಸಭೆ ಚುನಾವಣೆಯಲ್ಲಿ ವಿ ಸೋಮಣ್ಣನವರನ್ನು ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಅವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಅನ್ನು ಸೋಮಣ್ಣನವರಿಗೆ ನೀಡಿರಲಿಲ್ಲ. ಹಿರಿಯ ಲಿಂಗಾಯತ ನಾಯಕನನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರವನ್ನು ಸೋಮಣ್ಣನವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದರಿಂದ ನಾನು ಒಪ್ಪಿಕೊಂಡೆ ಎಂಬುದಾಗಿ ಸೋಮಣ್ಣ ತಿಳಿಸಿದ್ದಾರೆ.
ಈಗ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಸೋಮಣ್ಣ ಕಾಂಗ್ರೆಸ್ ಸೇರಬಹುದೆಂಬ ಮಾತುಗಳು ಕೇಳಿಬಂದಿವೆ. ಈ ಕುರಿತ ತೀರ್ಮಾನವನ್ನು ಡಿಸೆಂಬರ್ 6 ರಂದು ತಿಳಿಸುವುದಾಗಿ ಹೇಳಿದ್ದಾರೆ. ಒಂದು ಕಾಲದಲ್ಲಿ ಬಿಎಸ್‌ವೈ ಶಿಷ್ಯರೆಂದೇ ಗುರುತಿಸಿಕೊಂಡಿದ್ದ ಸೋಮಣ್ಣನವರು, ಮಾಜಿ ಸಿಎಂ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. ಸೋಮಣ್ಣನವರನ್ನು ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ದುರಂತವೆಂದರೆ, ತಾವು ಕರೆ ಮಾಡಿದರೂ ಸೋಮಣ್ಣ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಬಿಎಸ್‌ವೈ ಹೇಳಿದ್ದಾರೆ.
ಸಿದ್ದರಾಮಯ್ಯ ಸಪೋರ್ಟ್ ಮಾಡ್ತಾರೆ ಎಂದ ಯತ್ನಾಳ್
ಬಿಎಸ್‌ವೈ ಕುಟುಂಬದ ಕಟುಟೀಕಾಕಾರರಾಗಿರುವ ಯತ್ನಾಳ್ ವಿಜಯೇಂದ್ರ ಆಯ್ಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರು ಬ್ಲ್ಯಾಕ್‌ಮೇಲ್ ಮಾಡಿ ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯೇಂದ್ರ ನನ್ನ ಮನೆಗೆ ಬರುವುದೂ ಬೇಡವೆಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ತಲ್ಲಣವನ್ನೇ ಸೃಷ್ಟಿ ಮಾಡಿದೆ.
ಇಂದು ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಸಪೋರ್ಟ್ ಮಾಡ್ತಾರೆ. ನನ್ನ ನೇರ ನುಡಿ ಅವರಿಗೆ ಇಷ್ಟ. ನಾವೇನು ಇಂಡಿಯಾ-ಪಾಕಿಸ್ತಾನದವರಲ್ಲ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಯತ್ನಾಳ್ ಹೇಳಿದ್ದಾರೆ. ಇದು ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದದೆ.
ಬಿಜೆಪಿಯನ್ನು ಸುಡುತ್ತಲೇ ಇದೆ ಗುಪ್ತ ಬೆಂಕಿ
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಬೆಂಕಿ ಹೊತ್ತಿಕೊಳ್ಳುತ್ತಲೇ ಇದೆ. ವಿಜಯೇಂದ್ರ ಅಧ್ಯಕ್ಷರಾದ ನಂತರ ಬಂಡಾಯ ಮತ್ತಷ್ಟು ಉಲ್ಬಣಗೊಂಡಿದೆ. ಸೋಮಣ್ಣ, ಸಿಟಿ ರವಿ, ಯತ್ನಾಳ್ ಸೇರಿದಂತೆ ಕೆಲ ನಾಯಕರು ಪಕ್ಷದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಸದಸ್ಯರಾದ ಸದಾನಂದಗೌಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಬಚ್ಚೇಗೌಡ ಹಾಗೂ ಚಾಮರಾಜನಗರ ಕ್ಷೇತ್ರದ ಸಂಸದರಾದ ಶ್ರೀನಿವಾಸ ಪ್ರಸಾದ್ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ರಾಜ್ಯ ಬಿಜೆಪಿಯಲ್ಲಿ ಭಯಂಕರ ಬಂಡಾಯ ಕಾಣಿಸಿಕೊಂಡಿರುವುದು ಪಕ್ಷಕ್ಕೆ ನಷ್ಟವನ್ನಂತೂ ಮಾಡಲಿದೆ.
ಅಮಿತ್ ಶಾ ನಮ್ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು : ವಿ.ಸೋಮಣ್ಣ ಅಳಲು
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ: ಶ್ರೀರಾಮುಲು ಏನಂದ್ರು ಗೊತ್ತಾ?