Political News: ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶ್ ಗೌಡ ಮೊಲ ಬೇಟೆ ಆಡಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.
ತಮ್ಮ ಸ್ವಗ್ರಾಮ ತುರ್ವಿಹಾಳದಲ್ಲಿ ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆ ಆಡಿದ್ದ ಶಾಸಕರ ಪುತ್ರ ಹಾಗೂ ಅವರ ಸೋದರ ಈ ಕೃತ್ಯವನ್ನೆಸಗಿದ್ದಾರೆ. ಸುತ್ತಲೂ ಸೇರಿದ್ದ ಜನ ಸಿಳ್ಳೆ ಕೇಕೆ ಹಾಕುತ್ತಾ ಶಾಸಕರ ಪುತ್ರ ಮತ್ತು ಸಹೋದರನಿಗೆ ಜಯಕಾರ ಕೂಗಿದ್ದಾರೆ. ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ನೂರಾರು ಜನರ ಜೊತೆಗೆ ಖಡ್ಗ ಮತ್ತು ಕೊಡಲಿ ಪ್ರದರ್ಶನ ಮಾಡುತ್ತಾ ಮೆರವಣಿಗೆ ನಡೆಸಲಾಗಿತ್ತು ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ಮಾಡುತ್ತಿದ್ದ ದೃಶ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನೂ ಈ ಘಟನೆಯನ್ನು ಗಮನಿಸಿದ ಸಾರ್ವಜನಿಕರು ಶಾಸಕರ ಪುತ್ರ ಹಾಗೂ ಸಹೋದರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏನೋ ದೊಡ್ಡ ಮಹಾನ್ ಸಾಧನೆ ಗೈದವರಂತೆ ವಾದ್ಯಗಳ ಸಮೇತ ರಕ್ತಸಿಕ್ತ ಮೊಲಗಳ ಜೊತೆ ಮೆರವಣಿಗೆ ಮಾಡಿಸಿಕೊಂಡಿರುವ ಶಾಸಕರ ಕುಟುಂಬಸ್ಥರ ವರ್ತನೆಗೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಕಣ್ಮುಚ್ಚಿ ಕುಳಿತ ಇಲಾಖೆಗಳು..
ಅಲ್ಲದೆ ಕಳೆದ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದರು ಎಂಬ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳನ್ನು ಜೈಲಿಗೆ ಕಳುಹಿಸಿದ್ದ ಸರ್ಕಾರ ಈ ಪ್ರಕರಣದಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆಯಾ ಅನ್ನೋ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ಯಾರೇ ಆಗಲಿ ಅರಣ್ಯ ಇಲಾಖೆ ಕಾಯ್ದೆಗಳ ಪ್ರಕಾರ ಮೊಲಗಳ ಬೇಟೆಯಾಡುವುದು ಅಪರಾಧ ಕೃತ್ಯವಾದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನ ಹಿಡಿದು ಮೆರವಣಿಗೆ ಮಾಡಿದರೂ ಪೊಲೀಸ್ ಇಲಾಖೆ ಸಹ ಕಣ್ಮುಚ್ಚಿ ಕುಳಿತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ…
ಇನ್ನೂ ಈ ಮಾಹಿತಿ ನನ್ನ ಗಮನಕ್ಕೆ ಬಂದಿದ್ದು ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕೂಡ ಅವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದವರು ಯಾರೇ ಇದ್ದರೂ ಅವರನ್ನು ರಕ್ಷಣೆ ಮಾಡುವುದಿಲ್ಲ. ವರದಿ ತರಿಸಿಕೊಂಡು ಶಾಸಕರ ಪುತ್ರ ಹಾಗೂ ಸಹೋದರನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

