Hubli: ಮಳೆಗಾಗಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ; ಬೆಳೆ ನಾಶ ಮಾಡಿ ರೈತರ ಆಕ್ರಂದನ

Hubli News: ಧಾರವಾಡ ಜಿಲ್ಲೆಯಲ್ಲಿ ಮಳೆ ಅಭಾವ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ರೈತರ ಆತಂಕವೂ ಹೆಚ್ಚುತ್ತಿದೆ. ಒಂದೆಡೆ ಮಳೆಗಾಗಿ ದೇವರ ಮೊರೆ ಹೋಗಿರುವ ರೈತರು ವಿಶೇಷ ಪೂಜೆ ಸಲ್ಲಿಸಿದರೆ, ಮತ್ತೊಂದೆಡೆ ಸಂಪೂರ್ಣ ಹಾಳಾದ ಬೆಳೆಯನ್ನು ರೈತರೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ.

ಜುಲೈ ತಿಂಗಳಲ್ಲಿ ಸುರಿಯಬೇಕಿದ್ದ ವಾಡಿಕೆ ಮಳೆ ಈ ಬಾರಿ ಕೈಕೊಟ್ಟ ಪರಿಣಾಮ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ಭಾಗಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ಮಳೆ ನಂಬಿ ಬಿತ್ತನೆ ಮಾಡಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರನಿಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ ಹಾಗೂ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಲಿ ಎಂದು ರೈತರು ಪ್ರಾರ್ಥಿಸಿದರು.

ಮೈಲಾರಲಿಂಗೇಶ್ವರನ ಭಾವಚಿತ್ರದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಭಕ್ತರು, ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕುದುರಿಕಾರರು, ಗ್ರಾಮಸ್ಥರು ಹಾಗೂ ಕುಂದಗೋಳ ಮಠದ ಶಿವಾನಂದ ಶ್ರೀಗಳು ಪೂಜೆಯಲ್ಲಿ ಭಾಗವಹಿಸಿ ಅನ್ನದಾತನ ಬದುಕು ಉಳಿಯಲಿ ಎಂದು ದೇವರಲ್ಲಿ ಮೊರೆಯಿಟ್ಟರು.

ಇತ್ತ ಶಿರೂರು–ಸಂಶಿ ನಡುವಿನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಸಂಪೂರ್ಣ ಹಾಳಾದ ವಟಾಣಿ ಬೆಳೆಯನ್ನು ರೈತರೇ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ನಾಶ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಬೆಳೆ ಉಳಿಯುವ ಯಾವುದೇ ನಿರೀಕ್ಷೆ ಇಲ್ಲದ ಕಾರಣ ರೈತರು ಕಣ್ಣೀರಿನಲ್ಲೇ ತಮ್ಮ ಪರಿಶ್ರಮವನ್ನು ಮಣ್ಣಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಒಟ್ಟಾರೆ, ಒಂದೆಡೆ ಮಳೆಗಾಗಿ ದೇವರ ಮೊರೆ… ಮತ್ತೊಂದೆಡೆ ಕಣ್ಣೆದುರೇ ಬೆಳೆ ನಾಶವಾಗುತ್ತಿರುವ ನೋವು. ಧಾರವಾಡ ಜಿಲ್ಲೆಯ ರೈತರು ಈಗ ಮಳೆಗಾಗಿ ಆಕಾಶದತ್ತ ನೋಡುತ್ತಿದ್ದು, ಸರ್ಕಾರ ಬರಗಾಲ ಘೋಷಿಸಿ ವಿಶೇಷ ಪ್ಯಾಕೇಜ್ ಮೂಲಕ ರೈತರ ನೆರವಿಗೆ ಧಾವಿಸಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

About The Author