Spiritual News: ದೇವಸ್ಥಾನಕ್ಕೆ, ಪುಣ್ಯಕ್ಷೇತ್ರಗಳಿಗೆ ಹೋಗುವಾಗ ಕುಟುಂಬ ಸಮೇತರಾಗಿ ಹೋಗಬೇಕು ಅಂತಾ ಹೇಳುತ್ತಾರೆ. ಯಾಕಂದ್ರೆ ಮದುವೆಯಾದ ಬಳಿಕವೂ ನೀವು ಒಬ್ಬೊಬ್ಬರೇ ಪುಣ್ಯ ಕ್ಷೇತ್ರಕ್ಕೆ ಹೋದರೆ, ಪುಣ್ಯ ಸಿಗುವುದಿಲ್ಲ ಅಂತಾ ಹಿರಿಯರು ಹೇಳ್ತಾರೆ. ಹಾಗಾದ್ರೆ ಹೀಗೆ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ..
ಪತಿ ಪತ್ನಿಯನ್ನು ಮನೆಯಲ್ಲೇ ಬಿಟ್ಟು ಪುಣ್ಯಕ್ಷೇತ್ರಕ್ಕೆ ಹೋದರೂ, ಪತ್ನಿಗೆ ಪತಿಯ ಪುಣ್ಯಕ್ಷೇತ್ರ ದರ್ಶನದ ಫಲ ಸಿಗುತ್ತದೆ. ಆದರೆ ಪತ್ನಿ ಪತಿಯನ್ನು ಬಿಟ್ಟು ಪುಣ್ಯ ಕ್ಷೇತ್ರಕ್ಕೆ ಹೋದರೆ, ಆ ಪುಣ್ಯ ಪತ್ನಿಗಷ್ಟೇ ಸಿಗುತ್ತದೆ. ಆದರೆ ಪತಿಗೆ ಸಿಗುವುದಿಲ್ಲ. ಪತ್ನಿ, ಪತಿಗೂ ಒಳ್ಳೆಯದಾಗಲಿ ಎಂದು ಬೇಡಿದರಷ್ಟೇ ಪತಿಗೂ ಆ ಪುಣ್ಯ ಸಿಗಬಹುದು.
ಹಾಗಾದ್ರೆ ಯಾಕೆ ಹೀಗೆ ಅಂತಾ ಕೇಳುವುದಾದರೆ, ಪತ್ನಿಯಾದವಳು ಮದುವೆಯಾದ ಬಳಿಕ ಪತಿಯ ಮನೆಯವರ ಕಾಳಜಿ ಮಾಡುತ್ತಾಳೆ. ಪತಿಯ ಮನೆಗೆ ಬಂದು, ಮನೆಗೆಲಸಗಳನ್ನು ಮಾಡುತ್ತಾಳೆ. ನಿಮ್ಮ ಮಗುವಿಗೆ ತಾಯಿಯಾಗುತ್ತಾಳೆ. ತನ್ನ ಆರೋಗ್ಯವನ್ನು ಪಣಕ್ಕಿಟ್ಟು, ನಿಮಗೆ ಮಗುವನ್ನು ಹೆತ್ತು ಕೊಡುತ್ತಾಳೆ. ಇದೆಲ್ಲವೂ ಆಕೆ ಮಾಡಿದ ತ್ಯಾಗವಾಗಿರುತ್ತದೆ. ಈ ತ್ಯಾಗದ ಫಲವಾಗಿಯೇ, ಪತಿ ಮಾಡಿದ ಪೂಜೆಯ ಫಲ, ಪತಿ ಮಾಡಿದ ಪುಣ್ಯಕ್ಷೇತ್ರಗಳ ದರ್ಶನದ ಫಲ ಅವಳಿಗೆ ಸಿಗುತ್ತದೆ.
ಪತಿ ಪುಣ್ಯಕ್ಷೇತ್ರ ದರ್ಶನ ಮಾಡುವಾಗ, ಪತ್ನಿಯನ್ನು ನೆನಪಿಸಿಕೊಳ್ಳದೇ ಹೋದರೂ, ಪತ್ನಿಗೆ ಆ ಪುಣ್ಯ ಸಿಕ್ಕೇ ಸಿಗುತ್ತದೆ. ಆದರೆ ಪತ್ನಿ ದೇವರ ದರ್ಶನಕ್ಕೆ ಹೋದಾಗ, ಆಕೆ ಪತಿಯನ್ನು ನೆನಪಿಸಿಕೊಂಡು, ಅವರಿಗೂ ಪುಣ್ಯ ಲಭಿಸಲಿ ಎಂದು ಬೇಡಿದರೆ ಮಾತ್ರ, ಪತಿಗೆ ಪುಣ್ಯದ ಫಲ ಸಿಗುತ್ತದೆ. ಹಾಗಾಗಿ ಪತಿ- ಪತ್ನಿ ಇಬ್ಬರೂ ಸೇರಿ ಪುಣ್ಯಕ್ಷೇತ್ರ ದರ್ಶನ ಮಾಡಿದರೆ, ಸಂಪೂರ್ಣ ಫಲ ಸಿಗುತ್ತದೆ ಅಂತಾರೆ ಹಿರಿಯರು.