ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಅದರಲ್ಲಿ ಸಮಯ ನೋಡಿ ಒಳ್ಳೆಯ ಕೆಲಸ ಮಾಡುವುದು ಕೂಡ ಒಂದು. ಮದುವೆಗೆ ಮುಹೂರ್ತವಿದೆ. ಗೃಹ ಪ್ರವೇಶ, ಪೂಜೆ, ಉಪನಯನ, ಇತ್ಯಾದಿ ಕೆಲಸಗಳಿಗೆ ನಾವು ಮುಹೂರ್ತವಿಡುತ್ತೇವೆ. ಅಷ್ಟೇ ಯಾಕೆ ವ್ಯಕ್ತಿ ಸತ್ತ ಮೇಲೂ, ಒಳ್ಳೆಯ ಟೈಮ್ ನೋಡಿ ಮಣ್ಣು ಮಾಡಲಾಗತ್ತೆ. ಎಲ್ಲದಕ್ಕೂ ಮುಹೂರ್ತ ಇಡುವಾಗ, ಪತಿ- ಪತ್ನಿ ಸಂಗ ಮಾಡುವಾಗಲೂ ಸಮಯ ನೋಡಬೇಕು ಅನ್ನುತ್ತೆ ನಮ್ಮ ಶಾಸ್ತ್ರ. ಹೀಗೆ ಸಮಯವಲ್ಲದ ಸಮಯದಲ್ಲಿ ಸಂಭೋಗ ಮಾಡಿದಕ್ಕಾಗಿ ಏನಾಯಿತು ಅನ್ನೋ ಕಥೆಯೂ ಇದೆ. ಆ ಕಥೆಯನ್ನ ಕೇಳೋಣ ಬನ್ನಿ..
ಮಕ್ಕಳು ಮಾಡಿಕೊಳ್ಳುವಾಗ, ದಿನ, ನಕ್ಷತ್ರ, ಉತ್ತಮ ಸಮಯವನ್ನ ನೋಡಬೇಕು ಅನ್ನೋದು ಹಿಂದೂ ಧರ್ಮದ ನಿಯಮ,. ಈ ರೀತಿ ಮುಹೂರ್ತ ನೋಡಿ, ನೀವು ಸಂಭೋಗ ಮಾಡಿದ್ದಲ್ಲಿ, ಉತ್ತಮವಾದ ಸಂತಾನವನ್ನ ಪಡಿಯಬಹುದು. ಆದ್ರೆ ತಿಥಿ, ನಕ್ಷತ್ರ, ಸಮಯ ನೋಡದೇ, ಸಂಗ ಮಾಡಿದ್ದಲ್ಲಿ, ದುರ್ಗುಣ ಸ್ವಭಾವದ ಮಗು ಹುಟ್ಟುತ್ತದೆ. ಹಿರಿಯರ ಪ್ರಕಾರ, ಬೆಳಗ್ಗಿನ ಜಾವ ಮತ್ತು ಮುಸ್ಸಂಜೆ ಹೊತ್ತಲ್ಲಿ, ಸಂಗ ಮಾಡುವುದನ್ನ ನಿಷೇಧಿಸಲಾಗಿದೆ. ಹೀಗೆ ಮಾಡಿದ್ದಲ್ಲಿ, ಮನೆಗೆ ದರಿದ್ರ ಬರುತ್ತದೆ ಅನ್ನೋ ನಂಬಿಕೆ ಇದೆ.
ಈ ಬಗ್ಗೆ ಒಂದು ಕಥೆ ಇದೆ. ದಿತಿ ಮತ್ತು ಕಶ್ಯಪ ಪತಿ ಪತ್ನಿ. ಒಮ್ಮೆ ದಿತಿ, ಕಶ್ಯಪರಿಗೆ ಪ್ರಣಯದಲ್ಲಿ ತೊಡಗುವಂತೆ ಕೇಳಿಕೊಂಡರು. ಆಗ ಋಷಿಗಳು ಮುಸ್ಸಂಜೆ ಹೊತ್ತಿಗೆ, ಸಂಧ್ಯಾ ವಂದನೆಯ ತಯಾರಿ ಮಾಡಿಕೊಳ್ಳುತ್ತಿದ್ದರು. ಆಗ ಕಶ್ಯಪ ಮುನಿ, ಇದು ಮುಸ್ಸಂಜೆ ಹೊತ್ತು, ಈಗ ನಾನು ಸಂಧ್ಯಾ ವಂದನೆ ಮಾಡಿ ಬರುತ್ತೇನೆ. ಇಬ್ಬರೂ ಉಂಡು ನಂತರ, ಪ್ರಣಯದಲ್ಲಿ ತೊಡಗೋಣ ಎಂದು ಹೇಳಿದರು.
ಆದ್ರೆ ದಿತಿಗೆ ಇದ್ಯಾವುದು ಬೇಕಾಗಿರಲಿಲ್ಲ. ಆಕೆ ಹಠ ಮಾಡಿದಳು. ಕಶ್ಯಪ ಮುನಿಗಳು, ಮುಸ್ಸಂಜೆ ಹೊತ್ತಿನಲ್ಲಿ ಲಕ್ಷ್ಮೀ ಮನೆಗೆ ಬರುತ್ತಾಳೆ. ಸರಸ್ವತಿ ನಾಲಿಗೆಯ ಮೇಲೆ ನಲಿದಾಡುತ್ತಾಳೆ. ರಾಕ್ಷಸರು ಕೂಡ ಈ ವೇಳೆಯಲ್ಲೇ ಓಡಾಡುತ್ತಾರೆ. ಹಾಗಾಗಿ ಮನೆಯಲ್ಲಿ ಶುಭ ಶುಭ ಮಾತನಾಡಬೇಕು. ಶುಭವಾದ ಕೆಲಸವನ್ನೇ ಮಾಡಬೇಕು ವಿನಃ, ಪ್ರಣಯವಲ್ಲ. ಸಂಧ್ಯಾವಂದನೆ ಮುಗಿಸಿ ಬರುತ್ತೇನೆ. ಅಲ್ಲಿಯವರೆಗೂ ತಾಳ್ಮೆಯಿಂದಿರು ಎಂದು ಹೇಳಿದರು.
ಆದರೂ ಒಪ್ಪದ ದಿತಿ ಪ್ರಣಯಕ್ಕಾಗಿ ಹಠ ಮಾಡಿದರು. ಆಗ ಕಶ್ಯಪರು, ದೇವಾನುದೇವತೆಗಳಿಗೆ ವಂದಿಸಿ, ದಿತಿಯ ಜೊತೆ ಸಂಗ ಮಾಡಿದರು. ನಂತರ ದಿತಿಗೆ ತನ್ನ ತಪ್ಪಿನ ಬಗ್ಗೆ ಅರಿವಾಯಿತು. ಆಗ ದಿತಿ, ಕಶ್ಯಪರಲ್ಲಿ ಕ್ಷಮೆ ಕೇಳಿದರು. ಆಗ ಕಶ್ಯಪರು, ನೀನು ಮಾಡಿದ ತಪ್ಪಿಗೆ, ನಿನಗೆ ರಾಕ್ಷಸ ಪುತ್ರರು ಜನಿಸುತ್ತಾರೆ ಎನ್ನುತ್ತಾರೆ. ಹಾಗೆ ಜನಿಸಿದ ಇಬ್ಬರು ಅವಳಿ ಪುತ್ರರೇ, ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಪು. ಈ ಕಾರಣಕ್ಕಾಗಿಯೇ, ಪತಿ ಪತ್ನಿ ಮುಸ್ಸಂಜೆ ವೇಳೆ ಸೇರಬಾರದು ಅಂತಾ ಹೇಳಲಾಗುತ್ತದೆ.