ಲಕ್ಷ್ಮೀ ದೇವಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ದೇವತೆ. ಯಾಕಂದ್ರೆ ಆಕೆ ಹಣದ ಸುರಿಮಳೆ ಸುರಿಸುವ ದೇವಿ. ಹಾಗಾಗಿ ಆಕೆ ಎಲ್ಲರಿಗೂ ಇಷ್ಟವಾಗೋದು ಸಹಜ. ಆದ್ರೆ ಲಕ್ಷ್ಮೀ ದೇವಿಯ ಸ್ವಯಂವರ ಆಗಿದ್ದು ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ, ಹಾಗಾದ್ರೆ ಲಕ್ಷ್ಮೀಯ ಸ್ವಯಂವರದ ಕಥೆಯನ್ನ ಕೇಳೋಣ ಬನ್ನಿ..
ಲಕ್ಷ್ಮೀ ದೇವಿ ವಿಷ್ಣುವಿನ ಮನದನ್ನೆ. ಈ ಮನದನ್ನೆ ಹುಟ್ಟಿದ್ದು, ಸಮುದ್ರ ಮಂಥನದ ಸಮಯದಲ್ಲಿ. ರಾಕ್ಷಕರು ಮತ್ತು ದೇವತೆಗಳು ಸೇರಿ ಅಮೃತವನ್ನು ಎಳೆದಾಡುತ್ತಿರುವಾಗ, ಆ ಕಲಶದಿಂದ ಉದ್ಭವವಾದ ದೇವತೆಯೇ ಈ ಲಕ್ಷ್ಮೀ ದೇವಿ. ಸಮುದ್ರ ಮಂಥನದ ವೇಳೆ ಲಕ್ಷ್ಮೀ ಉದ್ಭವವಾದಾಗ, ಆಕೆಯ ಸೌಂದರ್ಯ ಕಂಡ ಅಸುರರ ರಾಜ, ಆಕೆಯನ್ನು ವರಿಸಲು ಇಚ್ಛಿಸಿದ. ಆಗ ದೇವತೆಗಳು, ಆಕೆ ದೇವಿಯಾಗಿರುವ ಕಾರಣ, ಆಕೆ ದೇವಲೋಕದವರನ್ನ ಮದುವೆಯಾಗಬೇಕೆಂದು ಹೇಳಿದರು. ಆಗ ಅಸುರರು ಕೋಪಗೊಂಡು ದೇವತೆಗಳೊಂದಿಗೆ ಯುದ್ಧಕ್ಕೆ ಸಿದ್ಧರಾದರು.
ಆಗ ಬ್ರಹ್ಮದೇವ, ಇಂದಿನಿಂದ ಹೆಣ್ಣು ತನಗೆ ಬೇಕಾದ ವರನನ್ನೇ ವರಿಸಬಹುದು. ಆಕೆಗೆ ಯಾರೂ ಒತ್ತಾಯಿಸಿ ಮದುವೆಯಾಗುವಂತಿಲ್ಲ ಎಂದು ಹೇಳಿದರು. ಹಾಗಾಗಿ ಲಕ್ಷ್ಮೀ ದೇವಿಯ ಸ್ವಯಂವರವನ್ನ ರಚಿಸಲಾಯಿತು. ಅದರಲ್ಲಿ ಅಸುರರು ಮತ್ತು ದೇವತೆಗಳು ಭಾಗವಹಿಸಿದರು. ಆದರೆ ಲಕ್ಷ್ಮೀ ದೇವಿಯ ಮನಸ್ಸಿನಲ್ಲಿ ಆಗಲೇ ವಿಷ್ಣು ಆಸೀನನಾಗಿಬಿಟ್ಟಿದ್ದ. ಮದುವೆಯಾದರೆ ವಿಷ್ಣುವನ್ನೇ ಎಂದು ಆಕೆ ನಿರ್ಧರಿಸಿದ್ದಳು. ಆದರೆ ಸ್ವಯಂವರದಲ್ಲಿ ವಿಷ್ಣುದೇವ ಉಪಸ್ಥಿತನಿರಲಿಲ್ಲ. ಹಾಗಾಗಿ ಲಕ್ಷ್ಮೀ ದೇವಿಗೆ ಕಳವಳವಾಯಿತು. ಅಸುರರ ರಾಜ, ತನಗೇ ಮಾಲೆ ಹಾಕುವಂತೆ ಲಕ್ಷ್ಮೀ ದೇವಿಗೆ ಒತ್ತಾಯಿಸಿದ. ಆಗ ಪ್ರತ್ಯಕ್ಷರಾದ ವಿಷ್ಣು, ಲಕ್ಷ್ಮೀಯೊಂದಿಗೆ ವಿವಾಹವಾದರು.
ಇನ್ನೊಂದು ಕಥೆಯ ಪ್ರಕಾರ, ತ್ರಿಲೋಕ ಸಂಚಾರಿಯಾದ ನಾರದರಿಗೆ , ತಮ್ಮ ಕೆಲಸದ ಬಗ್ಗೆ ಅಹಂಕಾರವಿತ್ತು. ಈ ಅಹಂಕಾರವನ್ನು ಮುರಿಯಲು ಶ್ರೀ ವಿಷ್ಣು ನಿರ್ಧರಿಸಿದ. ಲಕ್ಷ್ಮೀ ದೇವಿಯ ಸ್ವಯಂವರಕ್ಕೆ ಸಿದ್ಧತೆಯಾಗುತ್ತಿತ್ತು. ಆಗ ನಾರದರು ಸ್ವಯಂವರದ ಸಿದ್ಧತೆಯನ್ನು ನೋಡಲು ಆ ಸ್ಥಳಕ್ಕೆ ಭೇಟಿ ಕೊಟ್ಟರು. ಅವರನ್ನು ಉಪಚರಿಸಿದ ಬಳಿಕ, ಲಕ್ಷ್ಮೀ ದೇವಿ ಅವರ ಆಶೀರ್ವಾದ ತೆಗೆದುಕೊಳ್ಳಲು ಬಂದಳು. ಆಕೆಯ ಸೌಂದರ್ಯವನ್ನು ನೋಡಿದ ನಾರದರು, ತಾಾನೂ ಈ ಸ್ವಯಂವರದಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿದರು.
ವಿಷ್ಣುವಿನ ಬಳಿ ಹೋದ ನಾರದರು, ನನಗೆ ಲಕ್ಷ್ಮೀದೇವಿಯನ್ನು ವರಿಸಬೇಕಾಗಿದೆ. ನಿನ್ನಂತೆ ನನ್ನನ್ನೂ ಸುಂದರಗೊಳಿಸು ಎಂದು ಕೇಳುತ್ತಾರೆ. ಆಗ ವಿಷ್ಣು ನಾರದರಿಗೆ ವಾನರನಂತೆ ಕಾಣುವಂತೆ ಮಾಡುತ್ತಾನೆ. ನೀವಿಗ ಚಂದ ಕಾಣುತ್ತಿದ್ದೀರಿ, ಹೋಗಿ ಸ್ವಯಂವರದಲ್ಲಿ ಭಾಗವಹಿಸಿ ಎನ್ನುತ್ತಾನೆ. ನಾರದರು ಸ್ವಯಂವರಕ್ಕೆ ಹೋಗುತ್ತಿದ್ದಂತೆ, ಅಲ್ಲಿದ್ದವರೆಲ್ಲ ಗೊಳ್ಳೆಂದು ನಗುತ್ತಾರೆ. ಲಕ್ಷ್ಮೀದೇವಿ ಜೋರಾಗಿಯೇ ನಗುತ್ತಾಳೆ. ನಾರದರಿಗೆ ಯಾಕೆ ಎಲ್ಲರೂ ನಗುತ್ತಿದ್ದಾರೆಂದು ತಿಳಿಯುವುದಿಲ್ಲ. ಆಗ ಅಲ್ಲಿಗೆ ಬಂದ ವಿಷ್ಣು, ಶ್ರೀ ಲಕ್ಷ್ಮೀಯನ್ನು ವರಿಸುತ್ತಾರೆ.
ಆಗ ನಾರದರಿಗೆ ಕೋಪ ಬರುತ್ತದೆ. ತಾನು ಲಕ್ಷ್ಮೀ ದೇವಿಯನ್ನು ವರಿಸಬೇಕೆಂದು ನಿರ್ಧರಿಸಿದ್ದರೆ, ವಿಷ್ಣು ಬಂದು ಹೀಗೆ ಮೋಸ ಮಾಡಿದನೆಂದು ನಾರದರಿಗೆ ಸಿಟ್ಟು ಬರುತ್ತದೆ. ನಂತರ ನೀರಿನಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿ, ನಾರದರಿಗೆ ಅವಮಾನವಾಗುತ್ತದೆ. ಆಗ ನಾರದರು, ನೀನು ಮುಂದಿನ ಜನ್ಮದಲ್ಲಿ ನಿನ್ನ ಪತ್ನಿಯಿಂದ ದೂರವಾಗಿ, ನನ್ನಂತೆ ಏಕಾಂಗಿತನ ಅನುಭವಿಸು. ನೀನು ನನ್ನನ್ನು ವಾನರನಂತೆ ಕಾಣುವ ರೀತಿ ಮಾಡಿದ್ದಕ್ಕೆ, ಮುಂದಿನ ಜನ್ಮದಲ್ಲಿ ನಿನ್ನ ಸಂಗಾತಿಯನ್ನು ಕಾಣಲು, ನೀನು ವಾನರ ಸಹಾಯ ಪಡೆಯುವಂತಾಗಲಿ ಎಂದು ಶಾಪ ಹಾಕುತ್ತಾರೆ.
ಹಾಗಾಗಿಯೇ ವಿಷ್ಣು ರಾಮನ ರೂಪ ತಾಳುತ್ತಾನೆ. ಮತ್ತು ಸೀತೆಯಿಂದ ದೂರವಾಗುತ್ತಾನೆ. ಸೀತೆ ರಾವಣನ ವಶದಲ್ಲಿದ್ದಾಗ, ಆಕೆಯನ್ನ ಕರೆತರಲು ಹನುಮನ ಸಹಾಯ ಪಡೆಯುತ್ತಾನೆ. ಇದು ಲಕ್ಷ್ಮೀದೇವಿಯ ಸ್ವಯಂವರದ ಬಗ್ಗೆ ಇರುವ ಕಥೆಗಳು.