ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Murder Case)ನ 2ನೇ ಆರೋಪಿ ನಟ ದರ್ಶನ್ (Actor Darshan) ಸದ್ಯ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಕರಣದ ತನಿಖೆ ಬಹುತೇಕ ಕೊನೆ ಹಂತಕ್ಕೆ ಬಂದು ನಿಂತಿದ್ದು, ಇನ್ನು ಒಂದೆರೆಡು ದಿನದಲ್ಲಿ ನ್ಯಾಯಾಲಯಕ್ಕೆ ಜಾರ್ಜ್ಶೀಟ್ (Chargesheet) ಸಲ್ಲಿಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧದ ಕೊಲೆ ಕೇಸ್ನ ಜಾರ್ಜ್ಶೀಟ್ ಅನ್ನು ಖುದ್ದಾಗಿ ಪರಿಶೀಲಿಸುತ್ತಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (Bengaluru Police Commissioner B Dayananda) ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಪ್ರಮುಖ ಆರೋಪಿಗಳಾಗಿದ್ದು, ಈವರೆಗೂ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಕೂಡ ಈಗಾಗಲೇ ಪೊಲೀಸರ ಕೈ ಸೇರಿದ್ದು, ಕೆಲ ಎಫ್ಎಸ್ಎಲ್ ರಿಪೋರ್ಟ್ಗಳು ಬರುವುದು ಇನ್ನೂ ಬಾಕಿ ಇದೆ. ಹೀಗಾಗಿ ಆದಷ್ಟು ಬೇಗ ಅಂದ್ರೆ 2 ದಿನಗಳ ಒಳಗೆ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಒಂದ್ಕಡೆ ಕಾಮಾಕ್ಷಿಪಾಳ್ಯ ಪೊಲೀಸರು ಚಾರ್ಜ್ಶೀಟ್ ಸಲ್ಲಿಸೋಕೆ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ರೆ, ಇತ್ತ ನಟ ದರ್ಶನ್ಗೆ ಆತಂಕ ಶುರುವಾಗಿದೆ. ಇಷ್ಟು ದಿನ ನಟ ದರ್ಶನ್ ಟಿವಿ ಬೇಕು ಎಂದು ಜೈಲಾಧಿಕಾರಿಗಳ ಬಳಿ ಕೇಳಿರಲಿಲ್ಲ. ಆದ್ರೆ ಚಾರ್ಜ್ಶೀಟ್ ಬಗ್ಗೆ ಪದೇ ಪದೇ ಜೈಲಿನ ಸಿಬ್ಬಂದಿಯ ಬಳಿ ವಿಚಾರಿಸುತ್ತಿದ್ದರು. ಇದೀಗ ಚಾರ್ಜ್ಶೀಟ್ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ತನಗೆ ಟಿವಿ ಬೇಕು ಎಂದು ಜೈಲಿನ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ನಟ ದರ್ಶನ್ ಇರುವ ಬಳ್ಳಾರಿ ಸೆಂಟ್ರಲ್ ಜೈಲಿನ ಸೆಲ್ನಲ್ಲಿ ಟಿವಿ ವ್ಯವಸ್ಥೆ ಇಲ್ಲ. ದರ್ಶನ್ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸೆಲ್ಗೆ ಟಿವಿ ವ್ಯವಸ್ಥೆ ಕಲ್ಪಿಸಲು ಜೈಲಿನ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಜಾರ್ಜ್ಶೀಟ್ ಬಗ್ಗೆ ಯಾರಿಂದಲೂ ನಿಖರವಾದ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಟಿವಿ ಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.