Sunday, September 8, 2024

Latest Posts

ರಾಯಚೂರಿನಲ್ಲಿ ಯಶಸ್ವಿ ಕೃಷಿ ಮಹಿಳೆ…!

- Advertisement -

www.karnatakatv.net : ರಾಯಚೂರು: ಎಂಜಿನಿಯರಿಂಗ್ ಕಲಿತು ಇನ್ಫೋಸಿಸ್ ನಲ್ಲಿ ಉದ್ಯೋಗ ದೊರೆತು ಕೈ ತುಂಬಾ ಸಂಬಳ ಇದ್ದು, ಅದನ್ನೆಲ್ಲ ಬಿಟ್ಟು ಈಗ ಯಶಸ್ವಿ ಮಹಿಳೆ ಕೃಷಿಕಳಾಗಿದ್ದಾಳೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮದ ಡಾ. ಕವಿತ ಮಿಶ್ರಾ  ಕಾಲೇಜು ಕಲಿಯುವ ವೇಳೆ ಪಂಚೆಯುಟ್ಟ ವ್ಯಕ್ತಿಯನ್ನು ನೋಡಿ ಓಡಿ ಹೋಗುತ್ತಿದ್ದರಂತೆ. ಅಂತಹ  ಮಹಿಳೆ ಇಂದು ಎಂಟು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ಲಕ್ಷಾಂತರ ರೂ. ಸಂಪಾದಿಸುತ್ತಿರುವ ಪ್ರಗತಿ ಪರ ರೈತ ಮಹಿಳೆ, ಬರೀ ರೈತ ಮಹಿಳೆ‌ ಅಂದರೆ ತಪ್ಪಾಗುತ್ತೆ,  ಕೃಷಿ ಮಹಿಳಾ ಉದ್ಯಮಿ ಆಗಿದ್ದಾಳೆ. ಓದಿದ್ದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಗಂಡನ ಮನೆಯಲ್ಲಿ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಅವಕಾಶವಿರಲಿಲ್ಲ. ತವರು ಮನೆಯಲ್ಲಿ ಚೆನ್ನಾಗಿ ಓದಿಸಿದ್ದರು. ಹೀಗಾಗಿ ಹೊಲದಲ್ಲಿ ದುಡಿಯುವ ಕೆಲಸ ಮಾಡುವುದು ಗೊತ್ತಿರಲಿಲ್ಲ. ಏಕೆಂದರೆ ಕೃಷಿ ಎಸಿ ರೂಂನಲ್ಲಿ ಕುಳಿತು ಲಕ್ಷಗಟ್ಟಲೇ ಹಣ ಎಣಿಸುವ ವೃತ್ತಿಯಲ್ಲ. ಮೈದಾ ಹಿಟ್ಟಿನಂತಿದ್ದ ಬಣ್ಣವನ್ನು ಮಣ್ಣಿಗೆ ನೀಡಿ ಮಣ್ಣಿನ ಬಣ್ಣವನ್ನು ನಾನು ಪಡೆದಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಕೆಲಸದಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ.

ರೈತರ ಬದುಕು ಕಷ್ಟದ ಜೀವನ ಎನ್ನುವ ಮಿಶ್ರಾ, ಭೂಮಿಗೆ ಎಲ್ಲವನ್ನೂ ಹಾಕುತ್ತೇವೆ, ಜತೆಗೆ ನಮ್ಮನ್ನು ನಾವೇ ಹಾಕುತ್ತೇವೆ. ಒಂದು ಎಕರೆಗೆ 10-15 ಕ್ವಿಂಟಲ್ ಧಾನ್ಯ ಬೆಳೆಯುತ್ತೇವೆ. ಅದಕ್ಕೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹೀಗಾಗಿ ರೈತರ ಪ್ರಯತ್ನಕ್ಕೆ ಅರ್ಥವಿರುವುದಿಲ್ಲ. ಹೀಗಾಗಿ ರೈತನಿಗೆ ಬೆಲೆ ಸಿಗುತ್ತಿಲ್ಲ. ಅವನ ಹೆಂಡತಿ, ಮಕ್ಕಳಿಗೂ ಗೌರವ ಸಿಗುತ್ತಿಲ್ಲ. ಎಲ್ಲದಕ್ಕಿಂತ ಸ್ವಾಭಿಮಾನದ ಜೀವನ ರೈತನದ್ದು. ರೈತ ಅನ್ನದಾತ, ಅವರು ಕೊಡುವವನೇ ಹೊರತು ಬೇಡುವವನಲ್ಲ‌ಎನ್ನುತ್ತಾರೆ. ರೈತರಿಗೆ ಪ್ರತಿ ತಿಂಗಳಿಗೆ ಸಂಬಳ ಬರುವುದಿಲ್ಲ, ನಿವೃತ್ತಿ ಬಳಿಕ ಪೆನ್ಷನ್ ಬರುವುದಿಲ್ಲ. ಹೀಗಾಗಿ ರೈತರಿಗೆ ಹೆಣ್ಣು ಕೊಡಲು ಜನ ಯೋಚಿಸುತ್ತಿದ್ದಾರೆ. ರೈತರು ಈ ಕುರಿತು ಚಿಂತಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ಪ್ರತಿ ತಿಂಗಳು ಸಂಬಳದ ರೀತಿ ಆದಾಯ ಪಡೆಯಬಹುದಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿಯನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಇನ್ನು ಕವಿತಾ ಮಿಶ್ರಾ ಅವರು 8 ಎಕರೆ 10 ಗುಂಟೆ ಕೃಷಿ ಭೂಮಿಯಲ್ಲಿ 2,100 ಶ್ರೀಗಂಧ, 1,000 ದಾಳಿಂಬೆ, 600 ಮಾವು, 600 ಸೀಬೆ ಹಣ್ಣು, 450 ಸೀತಾಫಲ, 100 ನೀರಲ ಹಣ್ಣು, 100 ಬೆಟ್ಟದ ನೆಲ್ಲಿಕಾಯಿ, 200 ನಿಂಬೆ ಗಿಡ, 200 ಮೋಸಂಬೆ ಗಿಡ, 200 ಸಾಗವಾನಿ, 50 ಕರಿಬೇವು ಗಿಡ, ನುಗ್ಗೆಕಾಯಿ ಗಿಡ ಬೆಳೆಯುತ್ತಿದ್ದಾರೆ. ಇದರೊಂದಿಗೆ ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಹೈನುಗಾರಿಕೆ ಇವೆಲ್ಲವನ್ನೂ ಮಾಡಿದ್ದಾರೆ. ಇದರಿಂದ ಮಾವಿನ ಸೀಸನ್‍ನಲ್ಲಿ ಮಾವಿನ ಹಣ್ಣು, ದಾಳಿಂಬೆ ಸೀಸನ್‍ನಲ್ಲಿ ದಾಳಿಂಬೆ ಹಣ್ಣು ಹೀಗೆ ಸತತವಾಗಿ ಹಣ ಬರುವಂತೆ ಬೆಳೆಗಳನ್ನು ಬೆಳೆಯಬೇಕು. ಆಗ ಪ್ರತಿ ತಿಂಗಳೂ ಆದಾಯ ನಿರೀಕ್ಷಿಸಲು ಸಾಧ್ಯ, ಇಲ್ಲದೇ ಹೋದರೆ ಮಾರುಕಟ್ಟೆ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಅಂತಾರೆ ಈ ಸಾಧಕಿ. ಇನ್ನೂ ಇಂತಹ ಸಾಧಕಿಯನ್ನ ಸಾವಿರಾರು ಪ್ರಶಸ್ತಿಗಳು ಅರಸಿ ಬಂದಿವೆ. ಅಷ್ಟೇ ಅಲ್ಲ ಮಿಶ್ರಾ ಅವರು ದೇಶದ ನಾನಾ ವಿಶ್ವವಿದ್ಯಾಲಯಗಳಿಗೆ ಕೃಷಿ ಬಗ್ಗೆ ಬೋಧನೆ‌ಮಾಡಲು ಸಂಪನ್ಮೂಲ ವ್ಯಕ್ತಿಯಾಗಿ ಹೋಗ್ತಾರೆ. ಇವರನ್ನ ನಡೆದಾಡುವ ಕೃಷಿ ವಿಶ್ವವಿದ್ಯಾಲಯ ಎಂದರೂ ತಪ್ಪಾಗಲಾರದು. ಜಗತ್ತು ರೈತನಿಗೆ ನೀಡುವ ಗೌರವದಲ್ಲಿ ಬದಲಾಗಬೇಕಿದೆ ಎನ್ನುವ ಇವರ ಕಲ್ಪನೆಗೆ ಕನಸಿಗೆ ಇವರ ಪತಿ ಸಾತ್ ನೀಡಿ ಪತ್ನಿಯ ಈ ಸಾಧನೆ ಖುಷಿ ಕೊಟ್ಟಿದೆ ಅಂತಾರೆ.

ಒಟ್ನಲ್ಲಿ ಆಧುನಿಕತೆಗೆ ಒಗ್ಗಿಕೊಂಡಿರುವ ಮಹಿಳೆ ಕೂಡ ನೆಮ್ಮದಿಯ ಕೆಲಸ ಹುಡುಕುತ್ತಾ ಇಲ್ಲವೇ ಮನೆ ಕೆಲಸದಲ್ಲೇ ಕಳೆದು ಹೋಗುವ ಮಹಿಳೆಯರ ಮದ್ಯೆ ಕವಿತಾ ಮಿಶ್ರಾ ವಿಭಿನ್ನವಾಗಿ ನಿಲ್ತಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ-  ರಾಯಚೂರು


- Advertisement -

Latest Posts

Don't Miss