ಯಕ್ಷ ರಂಗಾಯಣದ ಹೆಸರು ಬದಲಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಅಸಮಾಧಾನ

Political News: ಉಡುಪಿಯ ಕಾರ್ಕಳಜ ಯಕ್ಷ ರಂಗಾಯಣದ ಹೆಸರನ್ನುಕರಾವಳಿ ರಂಗಾಯಣ ಎಂದು ರಾಜ್ಯ ಸರ್ಕಾರ ಹೆಸರು ಬದಲಾಯಿಸಿದೆ. ಈ ಬಗ್ಗೆ ಶಾಸಕ ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಕಾರ್ಕಳದ ಯಕ್ಷರಂಗಾಯಣದ ಹೆಸರನ್ನು ವಿನಾಕಾರಣ ಬದಲಾಯಿಸಲಾಗಿದೆ. ಯಾವುದೇ ಸಮಾಲೋಚನೆ ಇಲ್ಲದೇ ಈ ರೀತಿ ಬೇಕಾಬಿಟ್ಟಿ ಆಡಳಿತ ನಡೆಸುತ್ತಿರುವುದು ನಿಮ್ಮ ಸರ್ಕಾರದ “ಅಂದಾದುಂದಿ” ನೀತಿಗೆ ಇನ್ನೊಂದು ಉದಾಹರಣೆ ಎಂದು ಸುನೀಲ್ ಕಿಡಿಕಾರಿದ್ದಾರೆ.

ಯಕ್ಷಗಾನ ಕರಾವಳಿಯ ಗಂಡು ಕಲೆ. ಪ್ರಾಚೀನ ರಂಗಭೂಮಿ. ಈ ಕಾರಣಕ್ಕಾಗಿಯೇ ಕಾರ್ಕಳದಲ್ಲಿ ರಂಗಾಯಣದ ಆರನೇ ಕೇಂದ್ರವನ್ನು ” ಯಕ್ಷರಂಗಾಯಣ” ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಗಿತ್ತು. ಈ ಕೇಂದ್ರ ಪ್ರಾರಂಭವಾದ ನಂತರ ಮೊದಲ ಬಾರಿಗೆ ಯಕ್ಷಗಾನ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಚಟುವಟಿಕೆ ನಡೆಸಲಾಗಿತ್ತು.

ಕಾಂಗ್ರೆಸ್ ಸರ್ಕಾರ ಬಂದ ನಂತರ ಯಕ್ಷಗಾನವೂ ಸೇರಿದಂತೆ ಎಲ್ಲ ಕಲಾ ಪ್ರಕಾರಗಳನ್ನು ನಿರ್ಲಕ್ಷಿಸಿದ್ದು ಬಹಿರಂಗ ಸತ್ಯ. ಇದರ ನಡುವೆ ಹೆಸರು ಬದಲಾಯಿಸುವ ಕೆಲಸವೂ ನಡೆದು ಹೋಗಿದೆ. ಇದು ಯಕ್ಷಗಾನಕ್ಕೆ ಮಾಡಿದ ದೊಡ್ಡ ತೇಜೋವಧೆ ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾವಳಿ‌ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನು ತರುತ್ತೇನೆ ಎಂದು ಅಬ್ಬರಿಸುತ್ತಿರುವ ಮುಖ್ಯಮಂತ್ರಿಗಳೇ‌ ನಿಮ್ಮ ಸರ್ಕಾರ ಯಾವುದೇ ಚರ್ಚೆಯನ್ನೂ‌ ನಡೆಸದೇ ಕರಾವಳಿಯ ಅಸ್ಮಿತೆಯನ್ನು ಅಳಿಸಲು ಮುಂದಾಗಿರುವುದು ಬೇಸರದ ಸಂಗತಿ.

ಇದು ಕಲೆ, ಕಲಾವಿದರು, ಯಕ್ಷಸಾಹಿತಿಗಳು ಹಾಗೂ ಸಂಘಟಕರಿಗೆ ಮಾಡಿದ ಮಹಾನ್ ಅಪಮಾನ. ನಿಮ್ಮ ಸರ್ಕಾರದ ಈ ಸಾಂಸ್ಕೃತಿಕ ದಬ್ಬಾಳಿಕೆ ಆಕ್ಷೇಪಾರ್ಹ. ಶಿವಕುಮಾರ್ ಅವರೇ ಯಕ್ಷಗಾನಕ್ಕೆ ಬನ್ನಿ. ಯಕ್ಷಸಾಹಿತ್ಯ ಹಾಗೂ ಕಥಾನಕವನ್ನು ಆಸ್ವಾದಿಸಿ. ಆದರೆ ಯಕ್ಷಗಾನಕ್ಕೆ ಅಪಮಾನ ಮಾಡದಿರಿ ಎಂದು ಸುನೀಲ್ ಕುಮಾರ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

About The Author