ಇತಿಹಾಸದಲ್ಲಿ ಜನ ನಿಮ್ಮನ್ನು ಗೃಹ ಸಚಿವಗಿರಿಂತ ನ್ಯೂಸ್ ಪೆಡ್ಲರ್ ಸಚಿವ ಎಂದು ನೆನಪಿಡುತ್ತಾರೆ: ಆರ್.ಅಶೋಕ್

Political News: ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜಿನ ಬಳಿ ಡ್ರಗ್ಸ್ ಮಾರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಲ್ಲದೇ, ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆಅವರೇ, ನಿಮ್ಮ ಪ್ರಕಾರ HM ಅಂದರೆ ಹೋಮ್ ಮಿನಿಸ್ಟರೋ ಅಥವಾ ಹೆಡ್ಲೈನ್ ಮಿನಿಸ್ಟರೋ? ಇಂದು ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಅತಿದೊಡ್ಡ ಅಪಾಯ ಡ್ರಗ್ಸ್ ಮಾಫಿಯಾ. ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ಗಳು, ಯುವಜನರು ಸೇರುವ ಸ್ಥಳಗಳು, ಎಲ್ಲವೂ ಇಂದು ಡ್ರಗ್ಸ್ ಪೆಡ್ಲರ್‌ಗಳ ಗುರಿಯಾಗುತ್ತಿವೆ. ಮಾಧ್ಯಮ ವರದಿಗಳು ರಾಜ್ಯದಲ್ಲಿ ಮಾದಕವಸ್ತು ಜಾಲ ಹೇಗೆ ಆಳವಾಗಿ ಬೇರುಬಿಟ್ಟಿದೆ ಎಂಬ ಆತಂಕಕಾರಿ ಚಿತ್ರಣವನ್ನು ಮಾಧ್ಯಮಗಳು ಪ್ರತಿದಿನ ಬಿಚ್ಚಿಸುತ್ತಿವೆ ಎಂದು ಆರ್,ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಾದಕವಸ್ತುಗಳ ಜಾಲದ ಹೆಡೆಮುರಿ ಕಟ್ಟಬೇಕಾದ ವಿಶೇಷ ಕಾರ್ಯಪಡೆಯೇ (ANTF) ಇಂದು ಕಾಯಂ ಮುಖ್ಯಸ್ಥರಿಲ್ಲದೆ, ಕನಿಷ್ಠ ಸಿಬ್ಬಂದಿಯೂ ಇಲ್ಲದೆ ಹಲ್ಲಿಲ್ಲದ ಹಾವಿನಂತೆ ತೆವಳುತ್ತಿದೆ! ಈ ಪಡೆಗೆ FIR ದಾಖಲಿಸುವ ಕನಿಷ್ಠ ಅಧಿಕಾರವನ್ನೂ ನೀಡದೆ ಸರ್ಕಾರ ಇದನ್ನು ಕೇವಲ ಒಂದು ಪ್ರದರ್ಶನದ ವಸ್ತುವನ್ನಾಗಿ ಮಾಡಿಕೊಂಡಿದೆ.

ಮಾಧ್ಯಮಗಳು ಬಿಚ್ಚಿಟ್ಟಿರುವ ಮತ್ತೊಂದು ಕರಾಳ ಸತ್ಯ ಇನ್ನೂ ಭಯಾನಕವಾಗಿದೆ. ಶಾಲಾ-ಕಾಲೇಜುಗಳ ಸುತ್ತಮುತ್ತಲಿರುವ ಕ್ಯಾಂಟೀನ್ ಹಾಗೂ ಡಬ್ಬಾ ಅಂಗಡಿಗಳೇ ಇಂದು ಡ್ರಗ್ ಪೆಡ್ಲರ್‌ಗಳ ಮುಖ್ಯ ಅಡ್ಡೆಗಳಾಗಿವೆ. ಸಾವಿರಾರು ಯುವಕರು ಈ ಜಾಲಕ್ಕೆ ಸಿಲುಕುತ್ತಿದ್ದರೂ, ನಿಮ್ಮ ಇಲಾಖೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಕಿಂಗ್‌ಪಿನ್‌ಗಳನ್ನು ಬಂಧಿಸಿ ಕೈತೊಳೆದುಕೊಂಡಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ಘೋರ ಪರಿಸ್ಥಿತಿಯಲ್ಲಿ ನಮ್ಮ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆಯೇ? ಯುವಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆಯೇ? ಖಂಡಿತ ಇಲ್ಲ! ನೀವು ಪ್ರತಿದಿನ:

  • ಹೊಸ ರಾಜಕೀಯ ವಿವಾದಗಳನ್ನು ಪೆಡಲ್ ಮಾಡುತ್ತಿದ್ದೀರಿ.
  • ಹೊಸ ಆರೋಪಗಳನ್ನು ಪೆಡಲ್ ಮಾಡುತ್ತಿದ್ದೀರಿ.
  • ಹೊಸ ಹೆಡ್ಲೈನ್‌ಗಳನ್ನು ಪೆಡಲ್ ಮಾಡುತ್ತಿದ್ದೀರಿ.

ಒಂದೆಡೆ ಡ್ರಗ್ಸ್ ಪೆಡ್ಲರ್‌ಗಳು ಯುವಕರ ಭವಿಷ್ಯವನ್ನು ಮಾರುತ್ತಿದ್ದರೆ, ಮತ್ತೊಂದೆಡೆ “ನ್ಯೂಸ್ ಪೆಡ್ಲರ್” ಸಚಿವರು ರಾಜಕೀಯ ಸುದ್ದಿಗಳನ್ನು ಮಾರುತ್ತಿದ್ದಾರೆ! ಇದಕ್ಕಿಂತ ದೊಡ್ಡ ಆಡಳಿತ ವೈಫಲ್ಯ ಇನ್ನೇನಿರಬಹುದು? ರಾಜ್ಯದಲ್ಲಿ ಸಾವಿರಾರು ಡ್ರಗ್ಸ್ ಪ್ರಕರಣಗಳು ದಾಖಲಾಗುತ್ತಿದ್ದರೂ, ಯುವಕರು ಬಲಿಯಾಗುತ್ತಿದ್ದರೂ ನಿಮ್ಮ ಆದ್ಯತೆ ಮಾತ್ರ ರಾಜಕೀಯ ಪ್ರಚಾರ ಮತ್ತು ಪ್ರತಿಪಕ್ಷಗಳ ವಿರುದ್ಧ ದಾಳಿ ಮಾಡುವುದೇ ಆಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕರ್ನಾಟಕಕ್ಕೆ ಇಂದು News Peddler Minister ಬೇಡ. Drug Peddlers ವಿರುದ್ಧ ನಿರ್ದಾಕ್ಷಿಣ್ಯವಾಗಿ ಹೋರಾಡುವ Home Minister ಬೇಕು. ವಿವಾದಗಳ ಮೂಲಕ ಸುದ್ದಿಯಲ್ಲಿರುವ Headline Hunting Minsiter ಅಲ್ಲ. ಡ್ರಗ್ಸ್ ಮಾಫಿಯಾ ಕರ್ನಾಟಕದ ಯುವಜನತೆಯನ್ನು ಬೇಟೆಯಾಡುತ್ತಿರುವಾಗ, ನೀವು ಮಾಧ್ಯಮಗಳಲ್ಲಿ ಹೆಡ್ಲೈನ್ಸ್ ಬೇಟೆಯಾಡುತ್ತಿರುವುದು ಈ ರಾಜ್ಯದ ದುರಂತ. ಡ್ರಗ್ಸ್ ಪೆಡ್ಲರ್‌ಗಳನ್ನು ಬೆನ್ನಟ್ಟಬೇಕಿದ್ದ ಸಚಿವರು ಇಂದು ಕೇವಲ ನ್ಯೂಸ್ ಪೆಡ್ಲರ್ ಆಗಿ ಪರಿವರ್ತನೆಯಾಗಿರುವುದು ಅತ್ಯಂತ ವಿಷಾದನೀಯ.

ಇನ್ನಾದರೂ ಆಡಳಿತದ ಕಡೆ ಗಮನಹರಿಸಿ ಯುವಕರ ಭವಿಷ್ಯವನ್ನು ಉಳಿಸಿ. ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಸಮರ್ಥ ಗೃಹ ಸಚಿವರಾಗಿ ಅಲ್ಲ, ಕೇವಲ ಒಬ್ಬ “ನ್ಯೂಸ್ ಪೆಡ್ಲರ್ ಸಚಿವ” ಎಂದು ನೆನಪಿಸಿಕೊಳ್ಳಲಿದೆ! ಎಂದು ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

About The Author