ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರಿಗೆ ಪಾಠ ಮಾಡುವಾಗ ಕುಚೇಷ್ಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ.ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್‌ಗೆ ಶಾಲೆಯ ಐದಾರು ವಿದ್ಯಾರ್ಥಿಗಳು ಕುಚೇಷ್ಟೆ ಮೂಲಕ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ ಜೊತೆಗೆ ಶಿಕ್ಷಕರ ತಲೆ ಮೇಲೆ ಬಕೆಟ್ ಇಟ್ಟು ವಿಕೃತಿ ಪ್ರದರ್ಶಿಸಿ ಸಂತೋಷಪಟ್ಟಿದ್ದಾರೆ. ಮಾತ್ರವಲ್ಲ, ಈ ವಿಡಿಯೋ ಮಾಡಿ ಖುಷಿಪಡುತ್ತಾ ಮನಸ್ಸಿಗೆ ಬಂದಂತ ರೀತಿಯಲ್ಲಿ ಮಾತನಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮಾಡಿದ್ದ ವಿಡಿಯೋ ಗುರುವಾರ ವೈರಲ್ ಆಗಿದ್ದು, ವಿದ್ಯಾರ್ಥಿಗಳ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕಾಶ್ ಬೋಗಾರ್ ಅತ್ಯಂತ ಸರಳ, ಸೌಮ್ಯ ಸ್ವಭಾವದ ಶಿಕ್ಷಕರು. ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು, ಈಗ ವಿದ್ಯಾರ್ಥಿಗಳು ಮಾಡಿರುವ ಕುಚೇಷ್ಟೆಯಿಂದ ಕಾಲೇಜಿಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಲ್ಲೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಶಿಕ್ಷಕರು, ಪ್ರಾಂಶುಪಾಲರು, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಶಿಕ್ಷಕ ಪ್ರಕಾಶ್ ಬೋಗಾರ್‌ಗೆ ಅವಮಾನ ಮಾಡಿರುವ ವಿದ್ಯಾರ್ಥಿಗಳು ಯಾರು? ಎಲ್ಲಿಯವರು? ಹೆಸರೇನು? ಎಂಬ ಕುರಿತು ವಿಚಾರಿಸಿದ್ದಾರೆ. ಇನ್ನು ದಾವಣಗೆರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ, “ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರಿಗೆ ಕುಚೇಷ್ಟೆ, ಅವಮಾನ ಮಾಡಿರುವ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತದೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಡಿಡಿಪಿಐಗೆ ಸೂಚನೆ ನೀಡಲಾಗುವುದು,” ಎಂದು ಹೇಳಿದ್ದಾರೆ.