Temple Story: ಬ್ರಾಹ್ಮಣರಲ್ಲಿ ಬ್ರಹ್ಮೋಪದೇಶ ಆದ ಬಳಿಕ ಜನಿವಾರ ಹಾಕುವ ಪದ್ಧತಿ ಇದೆ. ಅದು ಬರೀ ಪುರುಷರು ಧರಿಸುವ ಜನಿವಾರ. ಆದರೆ ನಮ್ಮ ಭಾರತದಲ್ಲಿ ಅದರಲ್ಲೂ ಗೋವಾದಲ್ಲಿ ಇರುವ ದೇವಿ ದೇವಸ್ಥಾನದಲ್ಲಿ ದೇವಿಗೆ ಜನಿವಾರ ಹಾಕಲಾಗುತ್ತದೆ. ಅರೇ ಇದ್ಯಾಕೆ ಹೀಗೆ ಅಂತೀರಾ, ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗೋವಾದ ಮಾರ್ದೋಳ್ನಲ್ಲಿ ಮಹಾಲಸಾ ನಾರಾಯಣಿ ದೇವಸ್ಥಾನವಿದೆ. ಪೋರ್ಚುಗೀಸರು ಭಾರತಕ್ಕೆ ಆಳ್ವಿಕೆಗೆ ಬರುವುದಕ್ಕೂ ಮುನ್ನ ಜಿಎಸ್ಬಿಗಳ ಕುಲದೇವತೆಗಳ ದೇವಸ್ಥಾನವೆಲ್ಲ ಗೋವಾದಲ್ಲೇ ಇದ್ದಿದ್ದು. ಈಗಲೂ ಕೆಲ ದೇವಸ್ಥಾನಗಳು ಗೋವಾದಲ್ಲೇ ಇದೆ. ಹಾಗಾಗಿ ಗೌಡ ಸಾರಸ್ವರ ಬ್ರಾಹ್ಮಣರು, ಕೊಂಕಣಿಗರ ಮನೆ ದೇವರ ದರ್ಶನಕ್ಕಾಗಿ ಗೋವಾ ರಾಜ್ಯಕ್ಕೆ ಹೋಗುತ್ತಾರೆ.
ಅಂಥ ಗೌಡ ಸಾರಸ್ವತ ಬ್ರಾಹ್ಮಣರ ಮನೆ ದೇವರಲ್ಲಿ ಮಹಾಲಸಾ ನಾರಾಯಣಿ ದೇವಿಯೂ ಇದ್ದಾಳೆ. ಈಕೆಗೆ ಜನಿವಾರ ಹಾಕಿ ಪೂಜಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂದರೆ, ಮಹಾಲಸಾ ನಾರಾಯಣಿ ಎಂದರೆ ಮೋಹಿನಿ ಎಂದರ್ಥ. ಸಮುದ್ರ ಮಂಥನದ ಕಾಲದಲ್ಲಿ ಅಮೃತ ರಾಕ್ಷಸರ ಕೈ ಸೇರಬಾರದು ಎಂದು ಶ್ರೀವಿಷ್ಣು ಮೋಹಿನಿಯ ರೂಪ ಧರಿಸಿ, ಅಮೃತ ದೇವತೆಗಳಿಗೆ ಸೇರುವಂತೆ ಮಾಡುತ್ತಾರೆ.
ಆ ಸಮಯದಲ್ಲಿ ಶ್ರೀವಿಷ್ಣು ಧರಿಸಿದ ಮೋಹಿನಿ ರೂಪವನ್ನೇ ಇಲ್ಲಿ ಮಹಾಲಸಾ ನಾರಾಯಣಿ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ರೂಪ ದೇವಿಯದ್ದಾದರೂ, ಆ ರೂಪ ಶ್ರೀವಿಷ್ಣುವಿನದ್ದು. ಈ ಕಾರಣಕ್ಕಾಗಿಯೇ ಮಹಾಲಸಾ ನಾರಾಯಣಿ ದೇವಿಗೆ ಜನಿವಾರ ಹಾಕಲಾಗುತ್ತದೆ.




