Bengaluru: ವಾಲ್ಮಿಕಿ ನಿಗಮ ಹಗರಣ ಕೇಸ್ಗೆ ಸಂಬಂಧಿಸಿದಂತೆ ಇಂದು ಇ.ಡಿ. ಮಾಜಿ ಸಚಿವ ನಾಗೇಂದ್ರ ಅವರನ್ನು 4 ಗಂಟೆಗಳ ಕಾಲ ವಿಚಾರಣೆ ಮಾಡಿತ್ತು. ಚಾರ್ಜ್ಶೀಟ್ ಬಳಿಕ ಈ ಕೇಸ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇ.ಡಿ. ನಾಗೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿತ್ತು. ಈ ಕಾರಣಕ್ಕೆ ಇಂದು ನಾಗೇಂದ್ರ 4 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿರುವ ನಾಗೇಂದ್ರ, ಕಳೆದ ಬಾರಿಯೂ ಸಮನ್ಸ್ ನೀಡಿದ್ದರು. ಆದರೆ ಆ ವೇಳೆ ನನಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಈಗ ಸಮಯವಿದ್ದ ಕಾರಣ ಬಂದು ವಿಚಾರಣೆ ಎದುರಿಸಿದ್ದೇನೆ. ಮುಂದೆ ಕರೆದಾಗಲೂ ಬಂದು ನನ್ನ ಕರ್ತವ್ಯ ನಾನು ಮಾಡುತ್ತೇನೆ. ಏಕೆಂದರೆ ಈ ಕೇಸ್ನಲ್ಲಿ ನನ್ನ ಪಾತ್ರವಿಲ್ಲ. ಸಾವಿರ ಸಲ ಹೇಳುತ್ತೇನೆ. ನಾನು ತಪ್ಪೇ ಮಾಡಿಲ್ಲ ಎಂದು ನಾಗೇಂದ್ರ ಹೇಳಿದ್ದಾರೆ.
ಅಲ್ಲದೇ ಇದು ಬ್ಯಾಂಕ್ನವರು ಮಾಡಿದ ಕೆಲಸ. ರಾಜಕೀಯದ ಕಾರಣ ನನ್ನ ಮೇಲೆ ಆರೋಪ ಮಾಡಲಾಗಿದೆ. ಕೋರ್ಟ್ನಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದು ನಾಗೇಂದ್ರ ಹೇಳಿದ್ದಾರೆ.
ಇನ್ನು ರಾಜೀನಾಮೆ ವಿಚಾರಣವಾಗಿ ಮಾತನಾಡಿರುವ ನಾಗೇಂದ್ರ, ನಾನೇ ರಾಜೀನಾಮೆಯನ್ನು ಹಿತಾಸಕ್ತಿಯಿಂದ ನೀಡಿದ್ದೇನೆ. ಬಿಜೆಪಿಯವರು ಈ ಬಗ್ಗೆ ಪಾದಯಾತ್ರೆಯೂ ಮಾಡಿದ್ದಾರೆ. ಮಾಡಲಿ. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ. ಪಾದಯಾತ್ರೆ ಶುರುವಾದ ದಿನ ಎಲ್ಲ ನಾಯಕರೂ, ಕಾರ್ಯಕರ್ತರೂ ಬಂದರು. ಆದರೆ ದಿನಗಳೆದಂತೆ, ನಿಧಾನವಾಗಿ ಕಾರ್ಯಕರ್ತರು ನಾಯಕರು ಕಾಲು ನೋವಿನ ನೆಪ ನೀಡಿ, ದೂರ ಹೋಗುತ್ತಿದ್ದಾರೆ. ಬಳ್ಳಾರಿಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ ಎಂದು ವಿಜಯೇಂದ್ರಗೆ ನಾಗೇಂದ್ರ ವ್ಯಂಗ್ಯವಾಡಿದ್ದಾರೆ.




