ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ವರಿಷ್ಠರಿಗೆ ಮಹೂರ್ತವೇ ಕೂಡಿ ಬರುತ್ತಿಲ್ಲ. ಒಂದಲ್ಲ ಒಂದು ಕಾರಣಕ್ಕಾಗಿ, ಮುಂದೆ, ಮುಂದಕ್ಕೆ ಹೋಗುತ್ತಲೇ ಇದೆ. ಉಪರಾಷ್ಟ್ರಪತಿ ಚುನಾವಣೆ ಆಯ್ತು. ಈಗ, ಬಿಹಾರ ವಿಧಾನಸಭಾ ಚುನಾವಣೆಯ ಸರದಿ. ಹಾಗಾಗಿ, ನವೆಂಬರ್ 14ರ ನಂತರ, ಇದಕ್ಕೆ ಪರಿಹಾರ ಸಿಗಬಹುದು ಎನ್ನುವ ಆಶಾವಾದವೇ, ಸದ್ಯ ರಾಜ್ಯ ಬಿಜೆಪಿಯಲ್ಲಿ ಮನೆ ಮಾಡಿದೆ.
ಸುಮಾರು 10 ರಾಜ್ಯಗಳಿಗೆ ರಾಜ್ಯಾಧ್ಯಕ್ಷರ ನೇಮಕಾತಿ ಪೆಂಡಿಂಗ್ ಇತ್ತು. ಒಂದೊಂದಾಗಿಯೇ ಕ್ಲಿಯರ್ ಮಾಡಿಕೊಂಡು ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸದ್ಯ ಬಾಕಿ ಉಳಿಸಿಕೊಂಡಿರುವುದು ಉತ್ತರ ಪ್ರದೇಶ ಮತ್ತು ಕರ್ನಾಟಕ. ಈ ಎರಡೂ ರಾಜ್ಯಗಳು ಬಿಜೆಪಿ ಪಕ್ಷದ ಪಾಲಿಗೆ ಪ್ರಮುಖವಾದ ರಾಜ್ಯಗಳಾಗಿವೆ.
ಉತ್ತರ ಪ್ರದೇಶ ಮತ್ತು ಕರ್ನಾಟಕ ಎರಡೂ ಕಡೆಯ ರಾಜ್ಯಾಧ್ಯಕ್ಷರ ನೇಮಕಕ್ಕೆ ಅಡ್ಡಿಯಾಗುತ್ತಿರುವುದು, ಆಯಾಯ ರಾಜ್ಯಗಳಲ್ಲಿರುವ ಗುಂಪುಗಾರಿಕೆ. ಈಗ ನಡೆಯುತ್ತಿದೆಯೋ ಹಾಗೇ ಮುಂದುವರಿಸಿಕೊಂಡು ಹೋಗಲು, ವರಿಷ್ಠರು ತೀರ್ಮಾನಿಸಿದ್ದಾರಾ ಎನ್ನುವ ಅನುಮಾನ ಕಾಡಲು ಆರಂಭಿಸಿದೆ. ಈ ನಡುವೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ, ಹೊಸ ತಲೆನೋವು ಶುರುವಾಗಿದೆಯಂತೆ.
ಹಲವು ನಾಯಕರ ಮೂಲಕ ಯಡಿಯೂರಪ್ಪ ಒತ್ತಡ ಹಾಕುತ್ತಿದ್ದರೂ, ವಿಜಯೇಂದ್ರ ಅವರನ್ನು ಮುಂದುವರಿಸಬಾರದು ಎನ್ನುವ ಒತ್ತಡವೂ ಅಷ್ಟೇ ಇದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ, ವಿಜಯೇಂದ್ರ ಅವರ ಪರವಾಗಿದ್ದಾರೆಂದು ಹೇಳಲಾಗುತ್ತಿದೆ. ಈ ನಡುವೆ, ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ದ, ಕೇಂದ್ರದ ನಾಯಕರಿಗೆ ದೂರು ಹೋಗಿದೆ ಎನ್ನುವ ಹೊಸ ಸುದ್ದಿ ಹರಿದಾಡುತ್ತಿದೆ.
ಭ್ರಷ್ಟಾಚಾರದ ಹಲವು ಆರೋಪಗಳು ರಾಜ್ಯ ಸರ್ಕಾರದ ವಿರುದ್ದ ಬರುತ್ತಿದ್ದರೂ, ಎಲ್ಲೋ ಕಾಟಾಚಾರಕ್ಕೆ ಪ್ರತಿಭಟನೆಗಳು ನಮ್ಮಲ್ಲಿ ನಡೆಯುತ್ತಿವೆ. ಜನರೇ, ರಾಜ್ಯದ ಬಿಜೆಪಿ ಘಟಕ ಆಕ್ಟೀವ್ ಆಗಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಗುತ್ತಿಗೆದಾರರು ಎಂಬತ್ತು ಪರ್ಸೆಂಟ್ ಆರೋಪವನ್ನು ಮಾಡುತ್ತಿದ್ದಾರೆ. ಇದನ್ನು ರಾಜ್ಯ ಬಿಜೆಪಿ ನಾಯಕರು ಎನ್ಕ್ಯಾಷ್ ಮಾಡಿಕೊಳ್ಳುತ್ತಿಲ್ಲ ಎನ್ನುವ ಲೆಟರ್, ಕಾರ್ಯಕರ್ತರ ಹೆಸರಿನಲ್ಲಿ ಬಿಜೆಪಿಯ ಕೇಂದ್ರದ ನಾಯಕರಿಗೆ ಹೋಗಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಮಟ್ಟಿಗೆ, ಬಿಜೆಪಿ ವರಿಷ್ಠರ ಅಂಗಳಕ್ಕೆ ಹೋಗುತ್ತಿರುವ ಕಾರ್ಯಕರ್ತರ ಲೆಟರ್ ಅನ್ನು, ಬಿಜೆಪಿ ವರಿಷ್ಠರು ಯಾವ ರೀತಿ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಬಿಹಾರ ಚುನಾವಣಾ ಫಲಿತಾಂಶದ ಬಳಿಕ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

