ತಮಿಳು ನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇಂದು ನಿಧನರಾಗಿದ್ದಾರೆ. ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದರು. ಶೇ.45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಅಂದಿನಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲು ವೆಲ್ಲಿಂಗ್ಟನ್ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು.
ಡಿ.8ರಂದು ತಮಿಳುನಾಡಿನ ಕೂನೂರು ಬಳಿಯ ಕಟ್ಟೇರಿ ಎಂಬ ಗುಡ್ಡಗಾಡು ಗ್ರಾಮದ ಬಳಿ ಸೇನಾ ವಿಐಪಿ ಹೆಲಿಕಾಪ್ಟರ್ ಪತನಗೊಂಡಿತ್ತು. ಅವರು ಸೂಲೂರಿಂದ ವೆಲ್ಲಿಂಗ್ಟನ್ಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಅವಘಡ ಆಗಿತ್ತು. ಅದರಲ್ಲಿ ಭಾರತದ ಮೊದಲ ಸಿಡಿಎಸ್ ಬಿಪಿನ್ ರಾವತ್ ಸೇರಿ 11 ಮಂದಿ ಸೇನಾಧಿಕಾರಿಗಳು ಇದ್ದರು. ದುರಂತದಲ್ಲಿ ಅಂದು ಮೃತಪಟ್ಟವರ ಮೃತದೇಹ ಗುರುತು ಪತ್ತೆ, ಅಂತ್ಯಸಂಸ್ಕಾರ ನಡೆದಿದೆ. ಆದರೆ ವರುಣ್ ಸಿಂಗ್ ಒಬ್ಬರು ಬದುಕುಳಿದಿದ್ದರು. ವರುಣ್ ಸಿಂಗ್ ಆರೋಗ್ಯ ಸ್ಥಿತಿ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಅವರ ಕುಟುಂಬಸ್ಥರೇ ಹೇಳಿದ್ದರು. ಆದರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಭಾರತೀಯ ವಾಯುಸೇನೆ, ವರುಣ್ ಸಿಂಗ್ ಗಂಭೀರ ಸ್ಥಿತಿಯಲ್ಲಿಯೇ ಇದ್ದಾರೆ. ಆದರೆ ಅವರು ಗುಣಮುಖರಾಗುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿತ್ತು. ಕಳೆದ ಆಗಸ್ಟ್ 15ರಂದು ವಿಂಗ್ ಕಮಾಂಡರ್ ವರುಣ್ ಸಿಂಗ್ ಅವರು ಹಗುರ ಯುದ್ಧ ವಿಮಾನ ಸ್ಕ್ವಾರ್ಡನ್ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು.