ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರಣೆಯ ಕಾರ್ಯವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪೂರ್ಣಗೊಳಿಸಿದೆ. ಸಂಸದರಾಗಿದ್ದಾಗ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಮಾಜಿ ಸಂಸದರಿಗೆ ಇನ್ನೂ ಜಾಮೀನು ಭಾಗ್ಯ ದೊರೆತಿಲ್ಲ. ಹಲವು ಬಾರಿ ಜಾಮೀನಿಗಾಗಿ ಕೋರ್ಟ್ ಮೊರೆಹೋದರೂ ಫಲ ನೀಡಿಲ್ಲ. ಆದರೆ ಅಂತಿಮವಾಗಿ ನ್ಯಾಯಾಲಯವು ಈ ಪ್ರಕರಣವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು, ಜುಲೈ 30ರಂದು ತೀರ್ಪನ್ನು ಮುಂದೂಡಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ ಇವುಗಳಲ್ಲಿ ಮನೆ ಕೆಲಸದ ಮಹಿಳೆಯೊಬ್ಬರು ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಈ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ಪ್ರಕರಣವು ಗಂಭೀರ ಸ್ವರೂಪ ಪಡೆಯಲು ಕಾರಣವಾಗಿತ್ತು. ಬಳಿಕ ಸರ್ಕಾರ ವಿಶೇಷ ತನಿಖಾ ತಂಡ ಎಸ್ಐಟಿಯನ್ನೂ ಸಹ ಈ ಪ್ರಕರಣದ ತನಿಖೆಗೆ ನೇಮಕ ಮಾಡಿತ್ತು.
ಇನ್ನೂ ಸಿಐಡಿ ಇನ್ಸ್‌ಪೆಕ್ಟರ್ ಶೋಭಾ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು, ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಒಟ್ಟು 26 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಅಲ್ಲದೆ ನ್ಯಾಯಾಲಯದ ವಿಚಾರಣೆ ವೇಳೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾದ ವಿಚಾರಗಳ ಬಗ್ಗೆ ಎರಡೂ ಕಡೆಯ ವಕೀಲರು ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಿದ್ದಾರೆ. ಇನ್ನೂ ವಿಶೇಷ ಸರ್ಕಾರಿ ಅಭಿಯೋಜಕರು, ಆರೋಪಿಯ ವಿರುದ್ಧ ಸಾಕ್ಷಿಗಳ ಆಧಾರದ ಮೇಲೆ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದರೆ, ಪ್ರಜ್ವಲ್ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿದರು. ಆದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಜ್ವಲ್‌ರ ಜಾಮೀನು ಅರ್ಜಿಗಳು ಈಗಾಗಲೇ ತಿರಸ್ಕೃತವಾಗಿದ್ದವು.
ಕಳೆದ ಜುಲೈ 9, 2025ರಂದು, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠವು, ಪ್ರಜ್ವಲ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿ, 10 ದಿನಗಳ ಒಳಗೆ ಆದೇಶ ನೀಡುವಂತೆ ಸೂಚನೆ ನೀಡಿತ್ತು. ಆದರೆ ಅಂತಿಮವಾಗಿ ಜುಲೈ 30ರ ತೀರ್ಪು ಪ್ರಜ್ವಲ್ ರೇವಣ್ಣ ಅವರ ಜಾಮೀನು ಭವಿಷ್ಯ ತೀರ್ಮಾನಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.