Political News: ಬಿಜೆಪಿ ಕಾರ್ಯಕರ್ತ ವಿನಯ್ ಸೊಮಯ್ಯ ಅವರ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್, ಕಾಂಗ್ರೆಸ್ ನ ಕೆಲ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿ ಬೆದರಿಕೆಯೊಡ್ಡಿದ್ದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುರದೃಷ್ಟಕರ. ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿ ಕರ್ನಾಟಕ ಘಟಕವು ವಿನಯ್ ಅವರಿಗೆ ಯಾವುದೇ ಕಾನೂನು ನೆರವು ನೀಡದೆ ಈಗ ಟ್ವಿಟ್ಟರ್‌ನಲ್ಲಿ ಆರ್ಭಟಿಸುತ್ತಿರುವುದು ಇವರ ಆದ್ಯತೆಗಳನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಅಡ್ಜಸ್ಟ್ಮೆಂಟ್ ನಿಲ್ಲಲಿ..
ಇದರಲ್ಲಿ ಆಡಳಿತಾರೂಢ ಪಕ್ಷದ ಇಬ್ಬರು ಹಾಲಿ ಶಾಸಕರ ಪಾತ್ರವಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಿಂದುತ್ವವಾದಿಗಳನ್ನು ಹಾಗೂ ಬಲಪಂಕ್ತೀಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅವರ ಕುಟುಂಬವನ್ನು, ಸ್ನೇಹಿತರನ್ನು ಬೆದರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಕುಟಿಲ ರಾಜಕಾರಣವನ್ನು ತೋರಿಸುತ್ತದೆ. ಹಿಂದುತ್ವದ ಪರ ಮಾತನಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ಬಳಿಕ ಅವರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುವವರನ್ನು ಸುಮ್ಮನೆ ಬಿಡಬಾರದು ಎಂದು ಯತ್ನಾಳ್ ವಿನಯ್ ಆತ್ಮಹತ್ಯೆಯನ್ನು ಖಂಡಿಸಿದ್ದಾರೆ.
ನಾನು ವಿನಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇನೆ. ಹಾಗೆಯೇ ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಪೊಲೀಸರು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿ, ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ. ಅಲ್ಲದೆ ಈಗಲಾದರೂ ಬಿಜೆಪಿ ನಾಯಕರು ಅಡ್ಜಸ್ಟ್ಮೆಂಟ್ ಮಾಡಿಕೊಳ್ಳದೆ ವಿನಯ್ ಆತ್ಮಕ್ಕೆ ಶಾಂತಿ ಸಿಗುವುದಕ್ಕಾಗಿ ಹೋರಾಟ ಮಾಡಲಿ ಎಂದು ಯತ್ನಾಳ್ ಕುಟುಕಿದ್ದಾರೆ.
ಪಾರದರ್ಶಕ ತನಿಖೆ ನಡೆಯಲಿ..
ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆಯ ಬಗ್ಗೆ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ರಾಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಅನಗತ್ಯ ಕಿರುಕುಳ, ಒತ್ತಡ, ದೌರ್ಜನ್ಯಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯು ಅತ್ಯಂತ ಪಾರದರ್ಶಕವಾಗಿ ನಡೆಯಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ ಎಂದು ಹೇಳಿದ್ದಾರೆ.
ಅಂದಹಾಗೆ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕ ಒತ್ತಡ ಉಂಟಾಗಲು ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವೆ. ಮೃತ ಕಾರ್ಯಕರ್ತ ವಿನಯ್ ಅವರ ನಿಧನದ ನೋವಿನಲ್ಲಿರುವ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ವಿಜಯೇಂದ್ರ ಪ್ರಾರ್ಥಿಸಿದ್ದಾರೆ. ಅದೇನೆ ಇರಲಿ ವಿನಯ್ ಸೋಮಯ್ಯ ಆತ್ಮಹತ್ಯೆಯ ಸುತ್ತ ನಾನು ಅನುಮಾನಗಳ ಹುತ್ತ ನಿರ್ಮಾಣವಾಗುತ್ತಿದೆ, ರಾಜಕೀಯ ನಾಯಕರ ಹೆಸರು ಥಳಕು ಹಾಕುತ್ತಿದೆ. ಆದರೆ ಈ ಕುರಿತು ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಯಾದಾಗಲೇ ಸತ್ಯ ಹೊರಬರಲಿದೆ.