ಕನ್ನಡ ಬಿಗ್ ಬಾಸ್ ಸೀಸನ್ 12 ಈಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಸಖತ್ ಹವಾ ಸೃಷ್ಟಿಸಿದೆ. ಅದರಲ್ಲೂ ಗಿಲ್ಲಿ ನಟ ಮನೆ ಒಳಗೆ ಟಾಪ್ ಕಂಟೆಸ್ಟೆಂಟ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಹಾಸ್ಯ, ತಕ್ಕ ಸಮಯದ ಪಂಚ್‌ಗಳು ಮತ್ತು ನ್ಯಾಚುರಲ್ ಸ್ಟೈಲ್‌ನಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ ಎಲ್ಲೆಡೆ ಗಿಲ್ಲಿ ಹವಾ ಮಾತ್ರ.
ಆಚೆ ಪ್ರಾಪರ್ಟಿ ಇಟ್ಟುಕೊಂಡು ಕಾಮಿಡಿ ಮಾಡಿ ಖ್ಯಾತಿ ಪಡೆದ ಗಿಲ್ಲಿ ನಟ, ಈಗ ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನೇ ತಮ್ಮ ಹೊಸ ಪ್ರಾಪರ್ಟಿಯಾಗಿ ಮಾಡಿಕೊಂಡು ಸಖತ್ ಕಾಮಿಡಿ ಮಾಡಿದ್ದಾರೆ. ವಿಶೇಷವಾಗಿ ಅಶ್ವಿನಿ ಮತ್ತು ಜಾನ್ವಿಗೆ ಕೊಡುವ ಅವರ ತೀಕ್ಷ್ಣ ಪಂಚ್‌ಗಳು ಪ್ರೇಕ್ಷಕರ ಮನರಂಜನೆಗೆ ಕಾರಣವಾಗಿವೆ. ಇತ್ತೀಚಿನ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಅಶ್ವಿನಿ ಹಾಗೂ ಜಾನ್ವಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರೆ, ಗಿಲ್ಲಿ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅದರ ಬಳಿಕ ಗಿಲ್ಲಿ ತಮ್ಮದೇ ಸ್ಟೈಲ್‌ನಲ್ಲಿ, ದೊಡ್ಡಮ್ಮ ದೋಸೆ ಕೊಡು, ಚಿಕ್ಕಮ್ಮ ಚಕ್ಲಿ ಕೊಡು, ಕೊತ್ತಿಮರಿ ಬೀಜ ಸಾರಿಗೆ ಹಾಕೋದು ಸೊಪ್ಪು ನೀವು ಮಾಡಿದ್ದು ತಪ್ಪು ಎಂದು ಹಾಸ್ಯಭರಿತ ಆಡುಭಾಷೆಯ ಪಂಚ್ ಹೊಡೆದು ಎಲ್ಲರನ್ನೂ ನಗಿಸಿದ್ದಾರೆ.
ಕಿಚ್ಚನ ಚಪ್ಪಾಳೆಯ ನಂತರ ಗಿಲ್ಲಿಯ ಫೋಟೋ ವಾಲ್‌ನಲ್ಲಿ ಹಾಕಲಾಗಿದ್ದು, ಅದನ್ನು ನೋಡಿ ಅಶ್ವಿನಿ, ಇಬ್ಬರ ಜಗಳದಲ್ಲಿ ಮೂರನೇಯನಿಗೆ ಲಾಭ ನಿನಗೆ ಆಗಿದೆ, ಈಗ ಏನ್ ಮಾತಾಡ್ತೀಯಾ, ಸುಮ್ನೀರು ಎಂದು ಟೀಕಿಸಿದರು. ಅದಕ್ಕೆ ಪ್ರತಿಯಾಗಿ ಜಾನ್ವಿ, ನಾವು ನಿನ್ನ ತರಾ ಅಲ್ಲ, ನೇರಾ ನೇರ ಮಾತಾಡ್ತೀವಿ ಎಂದರೆ, ಗಿಲ್ಲಿ ತಕ್ಷಣ, ಹೌದಾ ಜಾನು, ನೀನು ನೇರಾ ನೇರ ಆಡ್ತೀದಿಯಾ? ಎಂದು ಹಾಸ್ಯಾತ್ಮಕ ಟಾಂಗ್ ಕೊಟ್ಟರು. ಇದು ಕಳೆದ ವಾರದ ಗೆಜ್ಜೆ ಸದ್ದು ವಿಚಾರದ ಸಣ್ಣ ವ್ಯಂಗ್ಯವಾಯಿತು.
ಒಟ್ಟಿನಲ್ಲಿ, ಉಳಿದ ಬಿಗ್ ಬಾಸ್ ಸ್ಪರ್ಧಿಗಳು ಒಂದು ರೀತಿಯಾದರೆ, ಗಿಲ್ಲಿ ಸಂಪೂರ್ಣ ವಿಭಿನ್ನ. ಅವರ ಕಾಮಿಡಿ, ಪಂಚ್‌ಗಳು ಹಾಗೂ ಮನರಂಜನೆಯ ಶೈಲಿಯಿಂದ ಅವರು ಕನ್ನಡಿಗರ ಮೆಚ್ಚಿನ ಕಂಟೆಸ್ಟೆಂಟ್ ಆಗಿದ್ದಾರೆ. ಈ ಹಾದಿಯಲ್ಲೇ ಮುಂದುವರಿದರೆ, ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿಯೇ ಪಕ್ಕಾ ಎನ್ನುವ ಮಾತುಗಳು ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ