Haveri News: ಹಾವೇರಿ: ಹಾವೇರಿಯ ಹಾನಗಲ್‌ನಲ್ಲಿ ಶಾಸಕ ಶ್ರೀನಿವಾಸ್ ಮಾನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
2019ರಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಬಿಜೆಪಿ ಆಸಕ್ತಿ ತೋರಲಿಲ್ಲ. 2024ರ ಚುನಾವಣೆಯಲ್ಲಿ ಮಹಿಳೆಯರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ಮಾಡಿದೆ. ಎರಡು ವರ್ಷ ಕಳೆದರೂ ಬಿಜೆಪಿ ನಾಯಕರು ಯಾವುದೇ ಪ್ರಯತ್ನ ಮಾಡಿಲ್ಲ. ಸರಕಾರ ರಚನೆಯಾದ ಕೂಡಲೇ ಜನಗಣತಿ ಆರಂಭವಾಗಬೇಕಿತ್ತು. ಪಂಚರಾಜ್ಯ ಚುನಾವಣೆಗೆ ಮಹಿಳೆಯರ ಭಾವನೆ ದುರುಪಯೋಗ ಪಡಿಸಲಾಗಿದೆ ಎಂದು ಮಾನೆ ಆರೋಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಮಸೂದೆ ತರಲು ಕೇಂದ್ರ ಸರಕಾರ ಮುಂದಾಗಿದೆ. ಜನಗಣತಿ ಪೂರ್ಣಗೊಳಿಸಿ ಬಳಿಕ ಕ್ಷೇತ್ರ ಮರುವಿಂಗಡಣೆ ಮಾಡಲಿ ಎಂದು ಶಾಸಕ ಶ್ರೀನಿವಾಸ್ ಮಾನೆ ಹೇಳಿದ್ದಾರೆ.
ಇನ್ನು ಜನಗಣತಿ ಬಗ್ಗೆ ಮಾತನಾಡಿದ ಮಾನೆ, 543 ಲೋಕಸಭಾ ಸದಸ್ಯರಲ್ಲೇ 33% ಮೀಸಲಾತಿ ನೀಡಬೇಕು. ಇದೇ ಮಾದರಿ ವಿಧಾನಸಭೆಯಲ್ಲೂ ಜಾರಿಗೆ ಬರಬೇಕು. ಮೋದಿ ಮಾತು ಕೇಳಿ ಬಿಲ್ ಪಾಸ್ ಆದರೆ ಜಾತಿ ಜನಗಣತಿಗೆ ಹಿನ್ನಡೆಯಾಗುತ್ತದೆ. ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ರಾಜ್ಯಗಳ ಕೊಡುಗೆ ದೊಡ್ಡದು. ಉತ್ತರ, ಪಶ್ಚಿಮ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದಾರೆ ದಕ್ಷಿಣಕ್ಕೆ ಕಡಿಮೆ ಅನುದಾನ ನೀಡಿದ್ದಾರೆ. ಮಹಿಳೆಯರ ಭಾವನೆ ಜೊತೆ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ರಾಜ್ಯಗಳ ವಿರುದ್ಧ ದೊಡ್ಡ ಸಂಚು ನಡೆಸಿದ್ದಾರೆ.
ಮಹಿಳಾ ಮೀಸಲಾತಿ ಈ ಷಡ್ಯಂತ್ರಕ್ಕೆ ಬಲಿಯಾಗಬಾರದು. ಯೋಗಿ ಆದಿತ್ಯನಾಥ್ 2010ರಲ್ಲಿ ಮಸೂದೆಗೆ ವಿರೋಧಿಸಿದ್ದರು. ಭ್ರೂಣ ಹತ್ಯೆ ಪಾಪಗಳ ಪಟ್ಟಿಯಲ್ಲಿ ಮೊದಲನೆಯದು.. ಈ ಪದ ಬಳಕೆ ಮಾಡ್ತಾರೆ ಅಂದ್ರೆ ಅವರ ಮನಸ್ಥಿತಿ ಹೇಗಿದೆ ನೋಡಿ ಎಂದು ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ಶಾಸಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಚುನಾವಣೆ ಬಳಿಕ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎನ್ನುವ ಮೂಲಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶ್ರೀನಿವಾಸ್ ಮಾನೆ ಸುಳಿವು ನೀಡಿದ್ದಾರೆ.
ವಿನಯ ಕುಲಕರ್ಣಿ ಪರ ಮೌನ ಪ್ರತಿಭಟನೆ ನಡೆಸೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಾನೆ, ಕೋರ್ಟ್ ತೀರ್ಪಿಗೆ ನಾವು ತಲೆಬಾಗಲೇಬೇಕು. ವಿನಯ್ ಕುಲಕರ್ಣಿ ಜನಪ್ರಿಯ ನಾಯಕ. ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದಾರೆ ಎಂಬ ಅಭಿಪ್ರಾಯ ಇದೆ. ವಿನಯ್ ಕುಲಕರ್ಣಿ ತಾವೇ ಕೋರ್ಟ್ ತೀರ್ಪಿಗೆ ತಲೆಬಾಗ್ತೀನಿ ಎಂದಿದ್ದಾರೆ ಎಂದು ಮಾನೆ ಹೇಳಿದ್ದಾರೆ.




