Hubli News: 7 ಸಾವಿರ ತಾಯಂದಿರಿಂದ ಹಾಲು ದಾನ, 2.5 ಸಾವಿರ ಶಿಶುಗಳಿಗೆ ಪ್ರಯೋಜನದ ದಾಖಲೆ!

Hubli News: ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜು-ಸಂಶೋಧನಾ ಸಂಸ್ಥೆ (ಕೆಎಂಸಿ-ಆರ್‌ಐ)ಯ “ಜೀವಾಮೃತ” ಹಾಲಿನ ಬ್ಯಾಂಕ್ ಎರಡು ವರ್ಷಗಳಲ್ಲಿ 7,080 ತಾಯಂದಿರಿಂದ 1,516 ಲೀಟರ್ ಎದೆ ಹಾಲು ದಾನವಾಗಿ ಸಂಗ್ರಹಿಸಿದೆ. ಇದರಿಂದ ಅಕಾಲಿಕ ಶಿಶುಗಳು ಸೇರಿದಂತೆ 2,569 ಶಿಶುಗಳು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ತಮ್ಮ ಸ್ವಂತ ತಾಯಿಯ ಹಾಲು ಪಡೆಯಲು ಸಾಧ್ಯವಾಗದ ಶಿಶುಗಳು. ಅಗತ್ಯ ಪ್ರಮಾಣದಲ್ಲಿ ಎದೆ ಹಾಲು ಸಿಗದ, ಅಸ್ವಸ್ಥಗೊಂಡ ರೋಗ ಪೀಡಿತ ಮಕ್ಕಳಿಗೆ ಈ ಎದೆಹಾಲು ಸಂಸ್ಕರಣಾ ಕೇಂದ್ರ ನೆರವಾಗುತ್ತಿದೆ. ಈ ಮೂಲಕ ಈ ಕೇಂದ್ರ ಎದೆ ಹಾಲು ಸಂಗ್ರಹದಲ್ಲಿ ದಾಖಲೆ ಮಾಡಿದೆ.

2024ರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಎದೆ ಹಾಲಿನ ಮೊದಲ ಬ್ಯಾಂಕ್​: ಕೆಎಂಸಿ‌ಆರ್​ಐನ ಪ್ರಸೂತಿ ಹಾಗೂ ಮಕ್ಕಳ ವಿಭಾಗ ಚಿಕಿತ್ಸೆಗೆ ಹೆಸರಾಗಿದ್ದು, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಂದ ತಾಯಂದಿರು ಹೆರಿಗೆ ಹಾಗೂ ಅವರ ಅನಾರೋಗ್ಯ ‌ಪೀಡಿತ ಮಕ್ಕಳು ಇಲ್ಲಿ ದಾಖಲಾಗುತ್ತಾರೆ. ಹೀಗಾಗಿ ಕೆಎಂಸಿಆರ್​ಐನಿಂದ ಶಿಶುಗಳಿಗೆ ಪೌಷ್ಟಿಕ ಹಾಲು ಒದಗಿಸುವ ಗುರಿಯೊಂದಿಗೆ ಎಪ್ರಿಲ್ 12, 2024 ರಲ್ಲಿ ಹಾಲಿನ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಇದು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಮೊದಲ ಬ್ಯಾಂಕ್ ಆಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಈ ಬ್ಯಾಂಕ್ ಅನ್ನು ಕೆಎಂಸಿ-ಆರ್‌ಐನಲ್ಲಿ ಹುಬ್ಬಳ್ಳಿ ಮಿಡ್‌ಟೌನ್ ರೋಟರಿ ಕ್ಲಬ್ ಮತ್ತು ಕೊಪ್ಪೆಲ್ ರೋಟರಿ ಕ್ಲಬ್ ಸಹಯೋಗದೊಂದಿಗೆ ಸ್ಥಾಪಿಸಲಾಗಿದ್ದು, ಈ ಎದೆ ಹಾಲಿನ ಬ್ಯಾಂಕ್ ಮಕ್ಕಳ ಚಿಕಿತ್ಸಾ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಲ್ವರು ದಾದಿಯರು ಇಬ್ಬರು ಗ್ರೂಪ್ ಡಿ ಕೆಲಸಗಾರರು ಮತ್ತು ಒಬ್ಬ ನೋಡಲ್ ಅಧಿಕಾರಿ ಈ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ, ಸುಮಾರು 330 ಪಾಶ್ಚರೀಕರಣ ಚಕ್ರಗಳು ಪೂರ್ಣಗೊಂಡಿವೆ ಮತ್ತು 1,483 ಲೀಟರ್ ಹಾಲನ್ನು ಪಾಶ್ಚರೀಕರಿಸಲಾಗಿದೆ.

ಆಸ್ಪತ್ರೆಯ ನಿರ್ದೇಶಕರಿಂದ ಮಾಹಿತಿ: ಈ ಕುರಿತಂತೆ ಕೆಎಂಸಿಆರ್​ಐ ನಿರ್ದೇಶಕ ಡಾ. ಈಶ್ವರ್ ಹೊಸಮನಿ ಅವರು ಕರ್ನಾಟಕ ಟಿವಿ ಗೆ ಪ್ರತಿಕ್ರಿಯಿಸಿ, ಈ ಹಾಲಿನ ಬ್ಯಾಂಕ್‌ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು 2024 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ 7,080 ತಾಯಂದಿರು ತಮ್ಮ ಹಾಲನ್ನು ದಾನ ಮಾಡಿದ್ದಾರೆ. ಮಗುವಿನ ಬೆಳವಣಿಗೆ ಮತ್ತು ಪೌಷ್ಟಿಕಾಂಶವನ್ನು ಪಡೆಯಲು, ದಾನ ಮಾಡಿದ ಹಾಲು ಅತ್ಯುತ್ತಮವಾಗಿರುತ್ತದೆ. ರೋಟರಿ ಕ್ಲಬ್ ಅಡಿಯಲ್ಲಿ ಮಾನವ ಹಾಲನ್ನು ಸಂಗ್ರಹಿಸಲು ನಮ್ಮಲ್ಲಿ ಸುಸಜ್ಜಿತ ಉಪಕರಣಗಳಿವೆ. ಹಾಲನ್ನು ಎಲ್ಲಾ ಕ್ರಮಗಳೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ದಿನದಿಂದ ದಿನಕ್ಕೆ ದಾನಿಗಳು ಹೆಚ್ಚುತ್ತಿದ್ದಾರೆ. ನಾವು ಹೆಚ್ಚಾಗಿ ಹಾಲನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಸಂಗ್ರಹಣೆಯನ್ನು ವಿಸ್ತರಿಸಲು ಯೋಜನೆಗಳನ್ನು ಹೊಂದಿದ್ದೇವೆ. ತಾಯಂದಿರು ಸ್ವಯಂಪ್ರೇರಣೆಯಿಂದ ಇಲ್ಲಿ ತಮ್ಮ ಎದೆಹಾಲನ್ನು ದಾನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ತಾಯಿಯ ಹಾಲಿನಿಂದ ವಂಚಿತವಾದ ಮಕ್ಕಳಿಗೆ ವೈಜ್ಞಾನಿಕ ಮಾದರಿಯಲ್ಲಿ ಸಂಗ್ರಹಿಸಿ ಹಾಲು ವಿತರಿಸುವುದರಲ್ಲಿ ಸಫಲರಾಗಿದ್ದು, ಇಲ್ಲಿಯವರೆಗೂ 7080 ತಾಯಂದಿರಿಂದ 5016 ಲೀಟರ್ ಹಾಲು ಸಂಗ್ರಹವಾಗಿದೆ. ಇದರಿಂದ 2569 ಮಕ್ಕಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಸಂಗ್ರಹವಾದ ಹಾಲನ್ನು ಪಾಶ್ಚರೀಕರಣ ಇಡಲಾಗುತ್ತಿದೆ. ಇದಕ್ಕೆ ಬೇಡಿಕೆ ಹೆಚ್ಚಿದೆ. ಮಗುವಿಗೆ ತಾಯಿಯೇ ಹಾಲೇ ಶ್ರೇಷ್ಠವಾಗಿದೆ. ಇದರಿಂದ ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಗುವಿನ ದೈಹಿಕ ಹಾಗೂ‌ ಮಾನಸಿಕ ಚೇತರಿಕೆಯಲ್ಲಿ ತಾಯಿ ಹಾಲು ಅಮೂಲ್ಯವಾಗಿದ್ದು, ತಾಯಂದಿರು ಹೆಚ್ಚಿನ ಪ್ರಮಾಣದಲ್ಲಿ ದಾನ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ವಿವರಿಸಿದರು.

ತಾಯಿ ಹಾಲು ಘಟಕದಲ್ಲಿ ಕೌನ್ಸಿಲ್ ಮಾಡುವ ಮಹಿಳಾ ಸಿಬ್ಬಂದಿ ತಾಯಂದಿರಿಗೆ ಹಾಲಿನ ಮಹತ್ವದ ಬಗ್ಗೆ ಅರಿವು ನೀಡುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹಾಲು ದಾನ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಹಾಲು ಸಂಗ್ರಹಕ್ಕೆ ಬೇಕಾಗುವ ಎಲ್ಲಾ ‌ಉಪಕರಣಗಳನ್ನು ಕೆಎಂಸಿಆರ್​ಐ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುತ್ತಿದೆ. ಹೆಚ್ಚಿನ ಪ್ರಮಾಣದ ತಾಯಂದಿರು ತಮ್ಮ ಮಗುವಿಗೆ ಕೊಟ್ಟು ಮಿಕ್ಕಿದ ಹಾಲನ್ನು ದಾನ ಮಾಡುತ್ತಿದ್ದಾರೆ. ಇದರಿಂದ ಇನ್ನೊಂದು ಮಗುವಿಗೂ ಉಪಯೋಗವಾಗುತ್ತಿದೆ. ಸಾಕಷ್ಟು ತಾಯಂದಿರು ಸ್ವಯಂಪ್ರೇರಣೆಯಿಂದ ಸಂಸ್ಕರಣ ಘಟಕಕ್ಕೆ ಬಂದು ಹಾಲು ದಾನ ಮಾಡುತ್ತಿದ್ದಾರೆ. ಕೆಎಂಸಿಆರ್​ಐನಲ್ಲಿ ಹಾಲು ಸಂಗ್ರಹ ಸಾಕಷ್ಟು ಇದ್ದು, ಯಾವುದೇ ಕೊರತೆ ಇಲ್ಲ. ಹೊರಗಡೆಯಿಂದ ಅನಾರೋಗ್ಯಪೀಡಿತ ಹಾಗೂ ಹಾಲು ವಂಚಿತ ಮಕ್ಕಳಿಗೆ ಇದೇ ಹಾಲು ಬಳಕೆ ಮಾಡುತ್ತಿದ್ದು, ಕೆಎಂಸಿಆರ್​ಐನಿಂದ ಹೊರಗಡೆಗೆ ಹಾಲು ವಿತರಣೆ ಮಾಡುವದಿಲ್ಲ ಎಂದು ಅವರು ತಿಳಿಸಿದರು.

About The Author