Political News: ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮದೇ ಆದ ಶೈಲಿಯಲ್ಲಿ ಬಿಜೆಪಿಯನ್ನು ಕುಟುಕಿದ್ದಾರೆ. ಪುರಂದಾರ ದಾಸರ ಕೀರ್ತನೆಯನ್ನು ಉಲ್ಲೇಖಿಸಿ, ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ, ಉಪಕಾರ ಮಾಡಿದರೆ ಅಪಕರಿಸುವ ಕಾಲ, ಸಕಲವು ತಿಳಿದವಗೆ ದುರ್ಭಿಕ್ಷ ಕಾಲ, ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ, ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ, ಸತ್ಯವಂತರಿಗಿದು ಕಾಲವಲ್ಲ ಎಂದು ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕೇಸರಿ ಪಡೆಯ ವಿರುದ್ಧ ಯತ್ನಾಳ್ ಮಾರ್ಮಿಕವಾಗಿಯೇ ಚಾಟಿ ಬೀಸಿದ್ದಾರೆ.
ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದೆ ತಪ್ಪಾ..?
ಇನ್ನೂ ನಾನು ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಪಕ್ಷದೊಳಗಿನ ಸುಧಾರಣೆಗಳ ಬಗ್ಗೆ ಮಾತನಾಡಿದ್ದೇನೆ. ಅಲ್ಲದೆ ಏಕವ್ಯಕ್ತಿಯ ದಬ್ಬಾಳಿಕೆ ತಡೆಯಲು ಹಾಗೂ ನಮ್ಮ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. ಅಲ್ಲದೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ತಾವು ಅಂದುಕೊಂಡ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಂದಹಾಗೆ ನನ್ನನ್ನು ಅಮಾನತುಗೊಳಿಸುವ ನಿರ್ಧಾರದಿಂದ ಭ್ರಷ್ಟಾಚಾರ, ಕುಟುಂಬ ರಾಜಕೀಯ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಹಿಂದುತ್ವದ ವಿರುದ್ಧದ ನನ್ನ ಹೋರಾಟವನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ ಎಂದು ಗುಡುಗಿದ್ದಾರೆ.
ಅದೇ ಹುರುಪಿನಿಂದ ಸೇವೆ ಸಲ್ಲಿಸುತ್ತೇನೆ..!
ಏನೇ ಆದರೂ ನಾನು ನನ್ನ ಜನರಿಗೆ ಅದೇ ಹುರುಪು ಮತ್ತು ದೃಢತೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಯತ್ನಾಳ್ ಭಾವುಕರಾಗಿ ಹೇಳಿದ್ದಾರೆ. ಅಲ್ಲದೆ ನನಗೆ ಬೆಂಬಲವಾಗಿ ನಿಂತಿರುವ ಎಲ್ಲಾ ಕಾರ್ಯಕರ್ತರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ, ಪರಿಚಯಸ್ಥರಿಗೆ, ಸ್ವಾಮೀಜಿಗಳಿಗೆ ಹಾಗೂ ಮಾಧ್ಯಮಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಯತ್ನಾಳ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಯತ್ನಾಳ್ ನೂತನ ಪಕ್ಷ ಸ್ಥಾಪನೆ..?
ಕಳೆದ ಹಲವು ದಿನಗಳಿಂದ ಈ ಯತ್ನಾಳ್ ಅವರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದವು. ಅದರಲ್ಲಿ ಬಿಜೆಪಿ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಇವರು ಸಮಾನ ಮನಸ್ಕರೊಂದಿಗೆ ಸೇರಿ ರಾಜ್ಯದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರಾ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕವಾಗಿ ಸಚಿವ ಎಂ.ಬಿ.ಪಾಟೀಲ್ ಅವರೂ ಸಹ ಬಜೆಟ್ ಅಧಿವೇಶನದಲ್ಲಿ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಕಾಲೆಳೆದಿದ್ದರು. ಆದರೆ ಇದೀಗ ಆ ಮಾತಿಗೆ ಮಹತ್ವ ಬಂದಿದ್ದು, ಹೇಗೋ ಬಿಜೆಪಿಯಿಂದ ಹೊರ ಹಾಕಲಾಗಿರುವ ಯತ್ನಾಳ್ ಅವರು ತಮ್ಮದೇ ಆದ ಸ್ವಂತ ರಾಜಕೀಯ ಪಕ್ಷವನ್ನು ಸ್ತಾಪಿಸುತ್ತಾರಾ ಎನ್ನುವ ಮಾತುಗಳಿಗೆ ಈಗ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಂತಾಗಿವೆ.