Sunday, February 9, 2025

Latest Posts

Movie News: ಇದಪ್ಪಾ ರಶ್ಮಿಕಾ ಕಮಿಟ್ಮೆಂಟ್! ವೀಲ್ ಚ್ಹೇರ್ ನಲ್ಲೇ ಪ್ರಚಾರ

- Advertisement -

Movie News: ಸಿನಿಮಾ ಸೆಲಿಬ್ರಿಟಿಗಳು ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರು ನಡೆದ್ರೂ ಸುದ್ದಿ, ಕುಂತ್ರೂ ಸುದ್ದಿ. ಬಟ್ಟೆ ಹಾಕಿದ್ರೂ ಸುದ್ದಿ, ಹಾಕದಿದ್ದರೂ ಸುದ್ದಿ. ಅವರಿಗೆ ಸ್ವಲ್ಪ ಏನಾದ್ರೂ ತೊಂದರೆ ಆದರಂತೂ ಅದು ದೊಡ್ಡ ಸುದ್ದಿ. ಈಗ ರಶ್ಮಿಕಾ ಮಂದಣ್ಣ ಕೂಡ ಇಂಥದ್ದೊಂದು ಸುದ್ದಿಗೆ ಹೊರತಾಗಿಲ್ಲ. ವಿಷಯ ಏನಪ್ಪಾ ಅಂದರೆ, ರಶ್ಮಿಕಾ ಅವರು ಇತ್ತೀಚೆಗೆ ಜಿಮ್ ಮಾಡುವಾಗ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಹಾಗಾಗಿ ನಡೆಯೋದ್ದಕ್ಕೂ ಕಷ್ಟ ಪಡುತ್ತಿದ್ದರು. ಅಂತಹ ಸ್ಥಿತಿಯಲ್ಲಿದ್ದ ರಶ್ಮಿಕಾ ಬುಧವಾರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕುಂಟುತ್ತಲೇ ಕಾರಿನ ಕೆಳಗಿಳಿದಿದ್ದಾರೆ. ಅತ್ತ ವ್ಹೀಲ್ ಚೇರ್‌ನಲ್ಲೇ ಬಂದಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಕುಂಟುತ್ತಾ ಕಾರಿನಿಂದ ಇಳಿದು ವ್ಹೀಲ್ ಚೇರ್‌ನಲ್ಲಿ ಕೂರಲು ಹರಸಾಹಸ ಪಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾಲು ನೋವಿನ ನಡುವೆಯೂ ಒಪ್ಪಿಕೊಂಡಿರುವ ಸಿನಿಮಾದ ಕೆಲಸ ಮಾಡಲು ಹೈದರಾಬಾದ್‌ನಿಂದ ಮುಂಬೈಗೆ ಅವರು ತೆರಳಿದ್ದಾರೆ. ‘ಛಾವಾ’ ಸಿನಿಮಾಗೆ ಡಬ್ಬಿಂಗ್ ಮಾಡೋದ್ರಲ್ಲಿ ಅವರು ಬ್ಯುಸಿ. ಆದರೂ, ಇಂತಹ ಸಂದರ್ಭದಲ್ಲಿ ಸ್ವಲ್ಪ ಸಮಾಧಾನ ಹೇಳೋರು ಬೇಕಲ್ಲವೇ? ಸದ್ಯ ಅವರ ಫ್ಯಾನ್ಸ್ ಮಾತ್ರ, ಸೋಶಿಯಲ್ ಮೀಡಿಯಾದಲ್ಲಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ರಶ್ಮಿಕಾ ಅವರು ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾಗಿದ್ದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದರು. ನಾನು ಜಿಮ್‌ನಲ್ಲಿಗಾಯಗೊಂಡಿದ್ದೇನೆ. ಮುಂದಿನ ಕೆಲ ವಾರ ಅಥವಾ ತಿಂಗಳ ಕಾಲ ನಾನು ವಿಶ್ರಾಂತಿಯಲ್ಲಿರಬೇಕಾಗುತ್ತೆ. ಚೇತರಿಕೆಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ದೇವರಿಗೆ ಮಾತ್ರ ಗೊತ್ತು. ನನ್ನ ಕಾಲಿನ ನೋವು ಗುಣವಾದ ಬಳಿಕ ನಾನು ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಹೋಗುತ್ತೇನೆ. ಈ ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದರು.

ರಶ್ಮಿಕಾ ಮಂದಣ್ಣ ಸದ್ಯ ಬೇಡಿಕೆ ನಟಿ. ಇಂತಹ ಸಮಯದಲ್ಲಿ ಅವರಿಗೆ ವಿಶ್ರಾಂತಿ ಬೇಕು ನಿಜ. ಅವರ ಕಷ್ಟವನ್ನು ಅರ್ಥ ಮಾಡಿಕೊಂಡು ಸಲ್ಮಾನ್ ಖಾನ್ ಅವರೇ ತಮ್ಮ ಸಿಕಂದರ್ ಚಿತ್ರದ ಚಿತ್ರೀಕರಣ ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಕ್ಷಮೆಯನ್ನು ಕೇಳಿರುವ ರಶ್ಮಿಕಾ ಸದ್ಯ ವೀಲ್ ಚ್ಹೇರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿಪರತೆಯ ಪ್ರದರ್ಶನ ಮಾಡಿರುವುದು ಭೇಷ್ ಎನಿಸಿದೆ.

ಅಸಲಿಗೆ ನಡೆದಾಡಲು, ಕುಣಿದಾಡಲು ರಶ್ಮಿಕಾ ಅವರಿಗೆ ಈಗ ಸಾಧ್ಯ ಇಲ್ಲ. ಹಾಗಂತ ಮನೆಯಲ್ಲಿ ಸುಮ್ಮನೆ ಕೂರಲು ಆಗುವುದಿಲ್ಲ. ಯಾಕೆಂದರೆ, ರಶ್ಮಿಕಾ ಮಂದಣ್ಣ ಅಭಿನಯದ ಛಾವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿ ಐತಿಹಾಸಿಕ ಪಾತ್ರ ನಿರ್ವಹಿಸಿದ್ದು, ಛತ್ರಪತಿ ಶಿವಾಜಿ ಸೊಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಕೆಲಸ ಮಾಡುವ ಸಿನಿಮಾಗೆ ತೊಂದರೆ ಆಗಬಾರದು ಅಂತ, ಅವರೇ ಕಷ್ಟ ಮರೆತು ವೀಲ್ ಚ್ಹೇರ್‌ನಲ್ಲಿಯೇ ಛಾವಾ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ದಿಂದ ಸೀದಾ ಮುಂಬೈ ವಿಮಾನವನ್ನೇರಿದ್ದಾರೆ. ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರದ ಮೇಲೆ ರಶ್ಮಿಕಾ ಅವರಿಗೆ ಇರುವ ಶ್ರದ್ದೆಯನ್ನು ಕಂಡು ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಕೊಂಡಾಡುತ್ತಿದ್ದಾರ. ಇನ್ನು ಕೆಲವರು ರಶ್ಮಿಕಾ ಮಂದಣ್ಣ ಅವರ ಈ ಸ್ಥಿತಿ ಕಂಡು ಮರುಗುತ್ತಿದ್ದಾರೆ.

ಅಂದಹಾಗೆ, ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ. ಮರಾಠ ಮಹಾರಾಜನ ಮಹಾರಾಣಿಯಾಗಿ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಲಕ್ಷ್ಮಣ್ ಉಟೇಕರ್ ನಿರ್ದೇಶನ ಇದೆ. ಈಗಾಗಲೇ ಸ್ತ್ರೀ.. ಬೇಡಿಯಾ.. ಮುಂಜ್ಯಾನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದು, ಹಾರರ್ ವಿಭಾಗದಲ್ಲಿ ತಮ್ಮದೇ ಯುನಿವರ್ಸ್‌ನ ಸೃಷ್ಟಿಸುತ್ತಿರುವ ದಿನೇಶ್ ವಿಜ್ಜನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ಧಾರೆ. ವಿಶೇಷ ಅಂದರೆ ದಿನೇಶ್ ವಿಜ್ಜನ್ ನಿರ್ಮಾಣದ ಮುಂದಿನ ಚಿತ್ರ ಥಾಮಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ನಾಯಕಿ. ಅಕ್ಷಯ್ ಖನ್ನಾ ಈ ಚಿತ್ರದಲ್ಲಿದ್ದಾರೆ. ಎ.ಆರ್.ರೆಹಮಾನ್ ಸಂಗೀತವಿದೆ.

ಅಂದಹಾಗೆ, ರಶ್ಮಿಕಾ ಮಂದಣ್ಣ ಅವರಿಗೆ ಆದ ಈ ಗಾಯದಿಂದ ಕೇವಲ ಸಿಕಂದರ್ ಚಿತ್ರದ ಚಿತ್ರೀಕರಣ ಮಾತ್ರ ಮುಂದಕ್ಕೆ ಹೋಗಿಲ್ಲ. ಧನುಷ್ ಅಭಿನಯದ ಕುಬೇರ ಮತ್ತು ಆಯುಶ್ಮಾನ್ ಕುರಾನ ಅಭಿನಯದ ಥಾಮಾ ಚಿತ್ರದ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಸದ್ಯ ರಶ್ಮಿಕಾ ಕುಂಟುತ್ತಲೇ ಛಾವಾ ಚಿತ್ರದ ಟ್ರೇಲರ್ ಬಿಡುಗಡೆಗೆ ಭಾಗಿಯಾಗಿರೋದು ಸುದ್ದಿ ಮಾಡುತ್ತಿದೆ.

ವಿಜಯ್ ಭರಮಸಾಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss