ಆಸ್ಪತ್ರೆಯ ಸುತ್ತ ಮುತ್ತಲಿನ 20 ಮರಗಳಿಗೆ ಕೊಡಲಿ ಪೆಟ್ಟು!
ಪಾಂಡವಪುರ : ಪಾಂಡವಪುರ ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆ ಆವರಣದಲ್ಲಿದ್ದ 20ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸುತ್ತಮುತ್ತಲು ಹೊಂಗೆ, ಬೀಟೆ, ಕಾಡು ಬೇವು, ಇನ್ನಿತರ 50ಕ್ಕೂ ಹೆಚ್ಚು ಮರಗಳು ಇದ್ದು, ಆಸ್ಪತ್ರೆಯ ರೋಗಿಗಳು ಹಾಗೂ ಅವರ ಸಂಬಂಧಿಕರ ವಿಶ್ರಾಂತಿಗೆ ಉತ್ತಮ ಗಾಳಿಯನ್ನು ನೀಡುತ್ತಿದ್ದವು. ಆದರೆ ರಸ್ತೆ ಕಾಮಗಾರಿಗೆ ಸುಮಾರು 20 ಮರಗಳನ್ನು ನೆಲಸಮ ಮಾಡಲಾಗಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಉಳಿದ ಮರಗಳನ್ನು ಕತ್ತರಿಸದೆಯೇ ಕಾಮಗಾರಿ ನಡೆಸಬೇಕು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಕುಮಾರ್ ಅವರಿಗೆ ಸೂಚಿಸಿದ್ದಾರೆ.
ಮದ್ದೂರಿನಲ್ಲಿ ಮಳೆ ಆರ್ಭಟ..!
ಮದ್ದೂರು : ಮದ್ದೂರು ತಾಲೂಕಿನ ಸುತ್ತಮುತ್ತಲಿನ ಜನರು ಮಳೆ ಇಲ್ಲದೆ ಬಿಸಿಲಿನಿಂದ ಕಂಗೆಟ್ಟಿದ್ದರು. ಆದರೆ ನಿನ್ನೆ ಸುರಿದ ಮಳೆಯಿಂದಾಗಿ ಜನರು ಪರದಾಡಿದ್ದಾರೆ. ಬಿರುಗಾಳಿ ಸಹಿತ ಮಳೆಗೆ ಬೈಕ್ ಸವಾರರು, ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಇಲ್ಲಿನ ಮಂಡ್ಯ ಮದ್ದೂರು ಹೆದ್ದಾರಿಯು ಕಾಲುವೆ ರೀತಿ ಕಂಡು ಬಂದಿದ್ದು, ಅಂಗಡಿಗಳ ಮುಂದೆ ನೀರು ನಿಂತು ವಾಹನ ಸವಾರರು ಇಕ್ಕಟಿಗೆ ಸಿಲುಕಿದ್ದರು.
ಎಲ್ ಆರ್ ಶಿವರಾಮೇಗೌಡ ಕಾರ್ಯಕರ್ತರ ಸಭೆ!
ನಾಗಮಂಗಲ : ನಾಗಮಂಗಲದ ಬೆಳ್ಳೂರು ಕ್ರಾಸ್ ಬಳಿ ಇರುವ ಮಯೂರ ಹೋಟೆಲ್ ಬಳಿ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು. ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಕಾರ್ಯಕರ್ತರ ಸಭೆಯನ್ನು ನಡೆಸಿದ್ದು, ಮಯೂರ ಹೋಟೆಲ್ ಬಳಿ ಕಾರ್ಯಕರ್ತರನ್ನು ಭೇಟಿ ಮಾಡಿ ಸಭೆ ನಡೆಸಿದ್ದಾರೆ. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿಧಾನ ಸಭೆ ಚುನಾವಣೆಗಳು ಸಂಭವಿಸುತ್ತಿದ್ದು, ಎಲ್ಲ ನನ್ನ ಕಾರ್ಯಕರ್ತರು ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ; ಸಸಿಗಳು ನಾಶ..!
ಮಳವಳ್ಳಿ : ಮದ್ದೂರು ತಾಲೂಕಿನ ಹಾಲಗೂರು ಸಮೀಪವಿರುವ ಒಂದು ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ. ಸೋಲಬದಲ್ಲಿ ಮುನಿ ವೆಂಕಟಯ್ಯ ಎಂಬುವವರ ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ತೆಂಗು ಮತ್ತೆ ಮಾವಿನ ಸಸಿಗಳನ್ನು ನಾಶ ಪಡಿಸಿದ್ದು, ಕಾಡಾನೆಗಳ ದಾಳಿಗೆ ರೈತ ಮುನಿ ವೆಂಕಟಯ್ಯ ಕಂಗ್ಗೆಟ್ಟಿದ್ದಾರೆ. ಕಾಡಾನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಅಧಿಕಾರಿಗಳು ಕ್ರಮವಹಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.