Hubli News: ಹುಬ್ಬಳ್ಳಿ : ಇಂದು ನವಲಗುಂದ ತಾಲೂಕಿನ ಹಾಲಕುಸುಗಲ್ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಹಳ್ಳಿ ಸಂಸ್ಕೃತಿ ಗ್ರಾಮೀಣ ಸೊಗಡಿನ ಎತ್ತಿನ ಬಂಡಿ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಲಾಯಿತು.
ಮುತ್ತೈದೆಯರು ಆರತಿ ಬೆಳಗಿ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಯಾಗಿ ನಡೆಯಲಿ ಎಂದು ಹರಸಿ ಹಾರೈಸಿದರು. ಸುಮಾರು 15 ಕ್ಕೂ ಹೆಚ್ಚು ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಎತ್ತುಗಳಿಗೆ ಅಲಂಕರ ಮಾಡಲಾಗಿತ್ತು. ನೋಡುಗರಿಗೆ ಹಬ್ಬದಂತೆ ಮೆರವಣಿಗೆ ಭಾಸವಾಗಿದ್ದಂತೂ ನಿಜ. ವಿದ್ಯಾರ್ಥಿಗಳು ಮಹಾನ ಪುರುಷರ ವೇಷಭೂಷಣ ಧರಿಸಿ ಗಮನ ಸೆಳೆದರು. ಅಲ್ಲದೇ ಕಲಾವಿದೆ ಚನ್ನವ್ವ ದಾನಸೂರ ಅವರು ಹಾಡುಗಳನ್ನು ಹಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ವಿಷ್ಣು ಗುರನ್ನವರ ಅವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳ ಆಕರ್ಷಕ ಕೋಲಾಟ, ಲೇಜಿಮ್, ನೃತ್ಯ, ಹಾಡುಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಮಹಿಳೆಯರ ಡೊಳ್ಳು ಕುಣಿತ, ಮುತ್ತೈದೆಯರ ಕುಂಭಮೇಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ನಮ್ಮ ಸಂವಿಧಾನ ನಮ್ಮ ಹೆಮ್ಮೆ, ನಮ್ಮ ಸಂವಿಧಾನ ನಮ್ಮ ಪ್ರತಿಷ್ಠೆ, ಜೈ ಭೀಮ್, ಅಂಬೇಡ್ಕರ್, ಬಸವಣ್ಣನವರ ಕುರಿತಾದ ಜಯಘೋಷಗಳನ್ನು ಸಾರ್ವಜನಿಕರು ಕೂಗಿದರು. ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರ ಅವರ ಭಾವಚಿತ್ರದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ರಸ್ತೆಯ ಬದಿಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಕಫೀಲಾ ಏಲೂವಗಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ದಿ ಅಧಿಕಾರಿಗಳು, ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲ: ವಿವಾದದ ಬೆನ್ನಲ್ಲೇ ಸಂತೋಷ್ ಲಾಡ್ ಸ್ಪಷ್ಟನೆ
‘ಸಂತೋಷ್ ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಮೆಚ್ಯೂರ್ ಆಗಿ ಮಾತಾಡಲಿ’