International News: ಉಕ್ರೇನ್ ಹಾಗೂ ರಷ್ಯಾ ನಡುವೆ ಮುಂದುವರೆದಿದ್ದ ಯುದ್ಧಕ್ಕೆ ಇದೀಗ ತಾತ್ಕಾಲಿಕ ವಿರಾಮ ಬಿದ್ದಿದ್ದು, ಸೌದಿ ಅರೇಬಿಯಾದಲ್ಲಿ ನಡೆದ ಮಹತ್ವದ ಮಾತುಕತೆಯಲ್ಲಿ ಕದನ ವಿರಾಮಕ್ಕೆ ಉಕ್ರೇನ್ ಒಪ್ಪಿಕೊಂಡಿದೆ. ಅಲ್ಲದೆ ಇದೇ ವಿಚಾರವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನೂಇತ್ತೀಚಿಗೆ ಅಮೆರಿಕಕ್ಕೆ ಝೆಲೆನ್ಸ್ಕಿ ಭೇಟಿ ನೀಡಿದ್ದ ವೇಳೆ ಟ್ರಂಪ್ ನಡುವೆ ವಾಗ್ವಾದವೂ ನಡೆದಿತ್ತು. ಇದರ ಪರಿಣಾಮವಾಗಿ ಉಕ್ರೇನ್‌ಗೆ ನೀಡುತ್ತಿದ್ದ ಎಲ್ಲಾ ಸೇನಾ ನೆರವನ್ನು ತಾತ್ಕಾಲಿಕವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದರು.
ತೀವ್ರ ಪ್ರತಿಷ್ಠೆಯ ವಿಚಾರವಾಗಿದ್ದ ಯದ್ಧವನ್ನು ನಿಲ್ಲಿಸುವ ಕುರಿತು, ಸೌದಿ ಅರೇಬಿಯಾದ ಜಿದ್ದಾದಲ್ಲಿ ಸುಮಾರು 8 ಗಂಟೆಗಳ ಕಾಲದ ಸುದೀರ್ಘ ಮಾತುಕತೆಯ ಬಳಿಕ ಕದನ ವಿರಾಮದ ಬಗ್ಗೆ ತೀರ್ಮಾನಿಸಲಾಗಿದೆ. ಇದಾದ ಬಳಿಕ ಮಾತನಾಡಿರುವ ಟ್ರಂಪ್ ಮುಂದಿನ ಕೆಲವು ದಿನಗಳಲ್ಲಿ ಈ ಒಪ್ಪಂದ ಅಂತಿಮಗೊಳ್ಳಲಿದೆ. ಉಕ್ರೇನ್ಗಿಂತ ರಷ್ಯಾದ ಜೊತೆ ವ್ಯವಹರಿಸುವುದು ಸುಲಭ ಎಂದು ನಾನು ತಿಳಿದಿದ್ದೇನೆ. ಆದರೆ, ಉಕ್ರೇನ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಸಾಕಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಪೂರ್ಣ ಕದನ ವಿರಾಮ ಜಾರಿಗೆ ಬರಬೇಕು ಎಂದು ಟ್ರಂಪ್ ಮನವಿ ಮಾಡಿಕೊಂಡಿದ್ದಾರೆ.
ಈ ಎರಡು ದೇಶಗಳ ನಡುವೆ ಅಮೆರಿಕ ಮುಂದಿರಿಸಿದ್ದ ಕದನ ವಿರಾಮದ ಪ್ರಸ್ತಾವವನ್ನು ಉಕ್ರೇನ್ ಒಪ್ಪಿಕೊಂಡಿದೆ. ಇನ್ನೂ ರಷ್ಯಾ ಜೊತೆಗಿನ 30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಸಮ್ಮತಿಸಿದ ಬೆನ್ನಲ್ಲೇ ಉಕ್ರೇನ್‌ಗೆ ನೀಡುತ್ತಿದ್ದ ಸೇನಾ ನೆರವಿನ ಮೇಲೆ ವಿಧಿಸಿದ್ದ ತಾತ್ಕಾಲಿಕ ಸ್ಥಗಿತ ಕ್ರಮವನ್ನು ಟ್ರಂಪ್ ಸರ್ಕಾರ ವಾಪಸ್ ಪಡೆದಿದೆ. ಈ ಬೆನ್ನಲ್ಲೇ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲನ್ಸ್ಕಿ, ಈ ಯುದ್ಧ ಆರಂಭವಾದಾನಿಗಿಂದಲೂ ಉಕ್ರೇನ್ ಪ್ರತಿಕ್ಷಣವೂ ಶಾಂತಿಗಾಗಿ ಹೋರಾಡುತ್ತಿದೆ, ನಾವು ಸುರಕ್ಷತೆಯನ್ನು ಬಯಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇನ್ನೂ ಜೆದ್ದಾದಲ್ಲಿ ನಡೆದ ಮಾತುಕತೆಗೆ ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಕದನ ವಿರಾಮದ ಪ್ರಸ್ತಾಪವನ್ನು ರಷ್ಯಾಗೆ ಸಲ್ಲಿಸಲಿದೆ. ಯುದ್ದ ನಿಲ್ಲಿಸಲು ಉಕ್ರೇನ್ ಸಿದ್ದವಾಗಿದೆ. ರಷ್ಯಾದಿಂದಲೂ ಇದೇ ನಿರೀಕ್ಷೆ ಇದೆ. ಇದಕ್ಕೆ ಇಲ್ಲ ಅಥವಾ ಹೌದು ಎಂದು ಹೇಳುವುದು ರಷ್ಯಾ ಮೇಲೆ ನಿಂತಿದೆ. ಅವರು ಒಂದು ವೇಳೆ ಇಲ್ಲ ಎಂದರೆ, ಶಾಂತಿಗೆ ಇರುವ ಅಡ್ಡಿ ಏನು ಎಂಬುದು ತಿಳಿಯಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.